ತಾಲ್ಲೂಕು ಮಟ್ಟದ ಸ್ಪರ್ಧೆ 11 ರಿಂದ
ಬೀದರ್:ಆ.8: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಾಗೂ ಸೇಡಂನಲ್ಲಿ ನಡೆಯಲಿರುವ ಭಾರತೀಯ ಸಂಸ್ಕøತಿ ಉತ್ಸವದ ಪ್ರಯುಕ್ತ ಆಗಸ್ಟ್ 11 ಮತ್ತು 12 ರಂದು ಜಿಲ್ಲೆಯ ಏಳು ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಬೀದರ್, ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ, ಔರಾದ್, ಚಿಟಗುಪ್ಪ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.
ಬೀದರ್ ತಾಲ್ಲೂಕು ಮಟ್ಟದ ಸ್ಪರ್ಧೆ ಪ್ರತಾಪನಗರದ ಜನಸೇವಾ ಶಾಲೆ ಸಭಾಂಗಣದಲ್ಲಿ ಆಗಸ್ಟ್ 11ರಂದು ಬೆಳಿಗ್ಗೆ 10ಕ್ಕೆ ಜರುಗಲಿದೆ ಎಂದು ಹೇಳಿದ್ದಾರೆ.
ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಕಥೆ ಹೇಳುವುದು, ಚಿತ್ರಕಲೆ, ಭಾಷಣ, ಶಾಸ್ತ್ರಿಯ ನೃತ್ಯ, ರಂಗೋಲಿ, ಸಮೂಹ ಗಾಯನ, ಹಗ್ಗ ಜಿಗಿದಾಟ, ಸೂರ್ಯ ನಮಸ್ಕಾರ, ರಸಪ್ರಶ್ನೆ, ಭಜನೆ, ಕೋಲಾಟ ಸೇರಿ 14 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಕ್ಕಳು ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ನಗದು ಬಹುಮಾನ, ಫಲಕ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳು ತಪ್ಪದೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ್ದಾರೆ.