ಕನ್ನಡಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅನನ್ಯ
ಬೀದರ್:ಸೆ.30: ಕನ್ನಡ ಸಾಹಿತ್ಯಕ್ಕೆ ವಿದೇಶಿ ಕ್ರೈಸ್ತ ಮಿಷನರಿಗಳ ಕೊಡುಗೆ ಅನನ್ಯವಾಗಿದೆ ಎಂದು ಸಾಹಿತಿ, ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಅಭಿಪ್ರಾಯಪಟ್ಟರು.
ನಗರದ ಮಂಗಲಪೇಟನ ರೆ.ಎಂ.ಡಿ. ರಾಸ್ ಮೆಮೊರಿಯಲ್ ಚರ್ಚ್(ಹಳೆಯ)ನಲ್ಲಿ ಶುಕ್ರವಾರ ಸಂಜೆ ರೆವರೆಂಡ್ ಡಾ. ಜೆ.ಟಿ. ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆದ ಕನ್ನಡ ಗ್ರಂಥ ಸಂಪಾದನೆಗೆ ಕ್ರೈಸ್ತ ಮಿಷನರಿಗಳ ಕೊಡುಗೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೈಸ್ತ ಮಿಷನರಿಗಳು ಧಾರ್ಮಿಕ ಕಾರ್ಯಗಳ ಜತೆಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕ ಕೆಲಸವನ್ನೂ ಮಾಡಿವೆ ಎಂದು ತಿಳಿಸಿದರು.
ಕನ್ನಡ ನಾಡಿನ ಚರಿತ್ರೆ ಕಟ್ಟಿಕೊಡಲು ಆಧಾರವಾಗಿ ನಿಲ್ಲುವ ಕೈಫಿಯತು, ಬಖೈರು, ಶಾಸನ, ನಾಣ್ಯ, ಹಸ್ತಪ್ರತಿಗಳ ಸಂಶೋಧನೆ, ವ್ಯವಸ್ಥಿತ ಸಂಪಾದನೆ, ಪ್ರಕಟಣೆ ಮೂಲಕ ಮೌಲಿಕ ಕಾರ್ಯ ಮಾಡಿವೆ. ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗೆ ಹೊಸ ಆಯಾಮ ನೀಡಿವೆ. ಮುದ್ರಣ ಮಾಧ್ಯಮ ಬಂದ ನಂತರವಂತೂ ಭಾರತದ ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರದ ಚಿತ್ರಣವನ್ನೇ ಬದಲಿಸಿವೆ ಎಂದು ಹೇಳಿದರು.
ಎಲ್ಲ ಧರ್ಮಗಳು ಹುಟ್ಟಿರುವುದು ಮನುಕುಲದ ಒಳಿತಿಗಾಗಿ ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ನುಡಿದರು.
ಕ್ರೈಸ್ತ ಮಷಿನರಿಗಳು ಕನ್ನಡ-ನಾಡು ನುಡಿಯ ಅಮೋಘ ಸೇವೆ ಮಾಡಿವೆ ಎಂದು ಉದ್ಘಾಟನೆ ನೆರವೇರಿಸಿದ ಸೇಂಟ್ ಪೌಲ್ ಮೆಥೊಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ನೆಲ್ಸನ್ ಸುಮಿತ್ರಾ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಶ್ರೀದೇವಿ ಸುಮಂತ ಕಟ್ಟಿಮನಿ, ಸಾಹಿತಿ ಡಾ. ಧನರಾಜ ತುಡಮೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಕೆ. ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಮೆಥೋಡಿಸ್ಟ್ ಚರ್ಚ್ ಕೇಂದ್ರ ಸಭೆಯ ಸಭಾಪಾಲಕ ರೆವರೆಂಡ್ ಸೈಮನ್ ಮಾರ್ಕ್, ಕತೆಗಾರ ಗುರುನಾಥ ಅಕ್ಕಣ್ಣ, ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಡಾ. ದೇವದಾಸ ತುಮಕುಂಟೆ, ಡಾ. ಜೈ ಭಾರತ ಮಂಗೇಶ್ಕರ್, ಶಿವಶಂಕರ ಟೋಕರೆ, ಸಮೃತ್ ಸೂರ್ಯವಂಶಿ, ಜೈಕರ ರತ್ನಪ್ಪ, ಜಗನ್ನಾಥ ಕಮಲಾಪುರೆ, ಅಶೋಕ ಥೋರೆ, ಶಿರೋಮಣಿ ಡಾಕುಳಗಿ, ಮಾರುತಿ ಮಿತ್ರಾ, ಸುಧಾಕರ್, ಯೇಶಪ್ಪ ತುಡಮೆ ಮತ್ತಿತರರು ಇದ್ದರು.
ಸಂಪತಕುಮಾರ ಗುತ್ತೆದಾರ್ ಸ್ವಾಗತಿಸಿದರು. ಟಿ.ಎಂ. ಮಚ್ಚೆ ನಿರೂಪಿಸಿದರು. ಶಿರೋಮಣಿ ತಾರೆ ವಂದಿಸಿದರು.