ಸಹೋದರ ಭಾವದಿಂದ ಶಾಂತಿ ಸೌಹಾರ್ದತೆ : ಹಾರಕೂಡ ಶ್ರೀ
ಬಸವಕಲ್ಯಾಣ :ಸೆ.30: ಹಳ್ಳಿಯ ಜನತೆ ಒಂದು ಕುಟುಂಬದ ಸದಸ್ಯರಂತೆ ಅನೋನ್ಯತೆಯಿಂದ ಬದುಕಬೇಕು, ವೈಯಕ್ತಿಕ ಬದುಕಿಗಾಗಿ ಬೇರೆ ಬೇರೆ ಮಾರ್ಗ ಅನುಸರಿಸಿದರೂ ಗ್ರಾಮದ ಒಳಿತಿಗಾಗಿ ಎಲ್ಲರೂ ಒಂದಾಗಿ ನಡೆಯಬೇಕು ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಖೇರ್ಡ್ ಕೆ. ವಾಡಿ ಗ್ರಾಮದಲ್ಲಿ ಆಯೋಜಿಸಿದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ 720ನೇ ತುಲಾಭಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯರು ಗ್ರಾಮ ಗ್ರಾಮ ಅಭಿವೃದ್ಧಿಯೇ ಎಲ್ಲರ ದಿಟ್ಟ ನಿಲುವಾಗಿರಬೇಕು, ಹಳ್ಳಿಯಲ್ಲಿ ಯಾವುದೇ ಭೇದ ಭಾವ ಮಾಡದೆ ಸಹೋದರ ಭಾವದಿಂದ ನಡೆದಾಗ ಗ್ರಾಮ ಶಾಂತಿ ಸೌಹಾರ್ದತೆಯ ಧಾಮವಾಗಿ ರೂಪುಗೊಳ್ಳುತ್ತವ.ದೇ ಹವನ್ನು ದಂಡಿಸಿ ಪ್ರಾಮಾಣಿಕ ದುಡಿಮೆಯಿಂದ ಬಂದ ಸಂಪಾದನೆಯಿಂದ ಎಲ್ಲಾ ಕುಟುಂಬಸ್ಥರು ಪ್ರೀತಿಯಿಂದ ಉಪಯೋಗಿಸಿದರೆ ಅದಕ್ಕಿಂತ ದೊಡ್ಡ ಸೌಖ್ಯ ಇನ್ನೊಂದಿಲ್ಲ.
ಜಗತ್ತಿನಲ್ಲಿ ತಾಯಿಯ ಮಡಿಲು, ತಂದೆಯ ಹೆಗಲು ಸರ್ವಶ್ರೇಷ್ಠ ಪುಣ್ಯಕ್ಷೇತ್ರಗಳಾಗಿವೆ. ಪುಟ್ಟ ಹಳ್ಳಿ ಖೇರ್ಡ್ ಕೆ. ವಾಡಿಯಲ್ಲಿ ಹರಡಿರುವ ಹಾರಕೂಡ ಶ್ರೀ ಮಠದ ಮೇಲಿನ ಭಕ್ತಿಯ ಬಳ್ಳಿ ಯಾವತ್ತೂ ಹಸಿರಾಗಿರಲಿ, ಚನ್ನಬಸವ ಶಿವಯೋಗಿಗಳ ಶ್ರೀರಕ್ಷೆಯಿಂದ ಸರ್ವರಿಗೂ ಸನ್ಮಂಗಳವಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡದ ಪರಮ ಪೂಜ್ಯರಿಗೆ ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶರಣಪ್ಪ ಮಸ್ಕೆ, ದೇವಿಂದ್ರ ಬೆಂಕಿಪಳ್ಳಿ, ಹಣಮಂತರಾವ ಮೂಲಗೆ, ರಾಜು ಎಂಪಳ್ಳಿ, ಶರಣಪ್ಪ ಮೂಲಗೆ, ರವಿಕುಮಾರ ರಾಯಜಿ, ನಾಗೇಂದ್ರಪ್ಪ ಪೆÇಲೀಸ್ ಪಾಟೀಲ, ಸಂತೋಷ್ ಅಳ್ಳೆ ಮುಂತಾದವರು ಉಪಸ್ಥಿತರಿದ್ದರು. ಜೀತು ಮೂಲಗೆ ಸ್ವಾಗತಿಸಿದರು. ಶರಣಬಸಪ್ಪ ಪಾರಪ್ಪಗೋಳು ನಿರೂಪಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಕರಬಸಯ್ಯ ಸ್ವಾಮಿ ಕೋಹಿನೂರ, ದಿಲೀಪಕುಮಾರ ದೇಸಾಯಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.