ಬೀದರ ದಕ್ಷಿಣಕ್ಕೆ 2211 ಪ್ರಧಾನಿ ಆವಾಸ್ ಮನೆ ಪಾರದರ್ಶಕವಾಗಿ ಹಂಚಿಕೆ ಪ್ರಕ್ರಿಯೆ : ಶಾಸಕ ಡಾ.ಬೆಲ್ದಾಳೆ
ಬೀದರ್:ಸೆ.30: ಪ್ರಧಾನ ಮಂತ್ರಿ ಆವಾಸ್ ಯೋಜನೆ ( ಪಿಎಂಎವೈ) ಅಡಿಯಲ್ಲಿ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ 2024-25ನೇ ಸಾಲಿಗಾಗಿ 2211 ಮನೆಗಳು ಮಂಜೂರಿಯಾಗಿವೆ ಎಂದು ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.
ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬರುವ ಬೀದರ ತಾಲ್ಲೂಕಿನ 24 ಗ್ರಾಮ ಪಂಚಾಯತಿಗಳಿಗೆ 1695 ಹಾಗೂ ಚಿಟಗುಪ್ಪಾ ತಾಲ್ಲೂಕಿನಲ್ಲಿ ಬರುವ 10 ಗ್ರಾಮ ಪಂಚಾಯಿತಿಗಳಿಗೆ 516 ಸೇರಿದಂತೆ ಒಟ್ಟು 2211 ಮನೆಗಳು ಪ್ರಸ್ತಕ್ತ ಬಂದಿವೆ. ಈ ಮನೆಗಳ ಹಂಚಿಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಂತೆ ಸಂಬಂಧಿತ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸತಿರಹಿತ ಕುಟುಂಬಗಳಿಗೆ ಸೂರು ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಈ ಯೋಜನೆಯಡಿ ಪರಿಶಿಷ್ಟರಿಗೆ ಹೆಚ್ಚಿನ ಮನೆಗಳ ಹಂಚಿಕೆಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಒಟ್ಟು 2211 ಮನೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ 883, ಪರಿಶಿಷ್ಟ ಪಂಗಡದವರಿಗೆ 358, ಹಿಂದುಳಿದ, ಅಲ್ಪಸಂಖ್ಯಾತರಿಗೆ 369 ಹಾಗೂ ಸಾಮಾನ್ಯ ವರ್ಗದವರಿಗೆ 606 ಮನೆಗಳ ಹಂಚಿಕೆ ಮಾಡಲಾಗಿದೆ. ಇದೇ ಮಾನದಂಡದ ಮೇಲೆ ಫಲಾನುಭವಿಗಳಿಗೆ ಲಾಭ ಸಿಗಲಿದೆ. ಈಗಾಗಲೇ ಗ್ರಾಪಂವಾರು ಸಿದ್ಧಪಡಿಸಿ ಸಲ್ಲಿಸಲಾಗಿರುವ ವಸತಿರಹಿತರ ಪಟ್ಟಿ ಆಧರಿಸಿ ಪಾರದರ್ಶಕವಾಗಿ ಮನೆಗಳ ಹಂಚಿಕೆ ನಡೆಯಲಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಯವರಿಗೆ ಒಂದು ಮನೆಗೆ 1.80 ಲಕ್ಷ ರೂ., ಸಾಮಾನ್ಯರಿಗೆ 1.20 ಲಕ್ಷ ರೂ. ನೇರವಾಗಿ ಫಲಾನುಭವಿ ಖಾತೆಗೆ ಹಂತ-ಹಂತದಲ್ಲಿ ಜಮೆಯಾಗಲಿದೆ. ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಶೌಚಾಲಯದ ವ್ಯವಸ್ಥೆ ಸಹ ಇರಲಿದೆ. ಇದಲ್ಲದೆ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಘಟಕಕ್ಕೆ ಇಬ್ಬರು ಕಾರ್ಮಿಕರ ಮೂಲಕ 29 ಮಾನವ ದಿನಗಳ ಸೃಜನೆ ಸಹ ನಡೆಯಲಿದೆ. ಮನೆ ಹಂಚಿಕೆ ಅರ್ಹರಿಗೆ ಪಾರದರ್ಶಕವಾಗಿ ಸಿಗಲಿದೆ. ಈ ವಿಷಯದಲ್ಲಿ ಯಾವೊಬ್ಬ ಫಲಾನುಭವಿ ಸಹ ಮಧ್ಯವರ್ತಿಗಳಿಗೆ ನಯಾಪೈಸೆ ಹಣ ನೀಡಕೂಡದು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಯಾರೊಬ್ಬರೂ ವಸತಿರಹಿತ ಇರಬಾರದು ಎಂಬ ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಪಿಎಂಎವೈ ಯೋಜನೆಯಡಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕಿ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಲಾಭ ಪಡೆಯಬೇಕು. ಯಾರೂ ಸಹ ಮನೆಗಾಗಿ ಮಧ್ಯವರ್ತಿಗಳ ದುಂಬಾಲು ಬೀಳುವುದು, ಹಣ ಕೊಡುವುದು ಮಾಡಬಾರದು. ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ.
-ಡಾ.ಶೈಲೇಂದ್ರ ಬೆಲ್ದಾಳೆ
ಬೀದರ್ ದಕ್ಷಿಣ ಶಾಸಕರು