ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಭಾಲ್ಕಿ ಘಟಕದ ವತಿಯಿಂದ ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ
ಭಾಲ್ಕಿ:ಆ.8:ನಗರದ ಬಿ.ಕೆ.ಐ.ಟಿ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ 2024-25 ನೇ ಸಾಲಿನ ಭಾಲ್ಕಿ ತಾಲೂಕಾ ಮಟ್ಟದ ಪದವಿ ಪೂರ್ವ ಮತ್ತು ವೃತ್ತಿಪರ ಶಿಕ್ಷಣ ಇಲಾಖೆಯ ಕ್ರೀಡಾಕೂಟ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅರಣ್ಯ ಹಾಗೂ ಜೈವಿಕ ಪರಿಸರ ಸಚಿವರು ಮತ್ತು ಬೀದರ ಉಸ್ತುವಾರಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆಯವರಿಗೆ ಕನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಭಾಲ್ಕಿ ತಾಲೂಕಾ ಘಟಕದ ವತಿಯಿಂದ ಸಂಘದ ಗೌರವಾಧ್ಯಕ್ಷರಾದ ಮಾಣಿಕರಾವ್ ಬಿರಾದಾರ ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯ್ತು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮಾನ್ಯ ಸಚಿವರು ಸಂಘದ ಪ್ರಮುಖ ಬೇಡಿಕೆಗಳಾದ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ-ಶಿಕ್ಷಕರೆಂದು ಪರಿಗಣಿಸಿ ಮುಖ್ಯಗುರುಗಳ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ದೊರಕಬಹುದಾದ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಲಾಗುವುದು. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು. ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲಗಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದ್ದಲ್ಲಿ ಸೇವಾ ಜೇಷ್ಠತಾ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಅಧಿಕ ಪ್ರಭಾರದಲ್ಲಿರುಸುವುದು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-2 ಇವರಿಗೆ ಕ್ಷೇತ್ರ ಶಿಕ್ಣಾಧಿಕಾರಿಗಳ ಕಛೇರಿಯಲ್ಲಿ ದೈಹಿಕ ಶಿಕ್ಷಣ ಸಂಯೋಜಕರ/ಸಹಾಯಕ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆ ಸೃಜಿಸಿ ಮುಂಬಡ್ತಿ ನೀಡುವುದು. ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ರದ್ದುಗೊಳಿಸಿ ಪ್ರತೀ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನು ಸೃಜನೆ ಮಾಡಿ ಹೆಚ್ಚುವರಿ ಪ್ರಕ್ರಿಯೆಯನ್ನು ಕೈ ಬಿಡುವುದು. ದೈಹಿಕ ಶಿಕ್ಷಣ ಶಿಕ್ಷಕರ ಹೆಸರುಗಳನ್ನು ಸೇವಾ ಜೇಷ್ಠತಾ ಆಧಾರದ ಮೇಲೆ ಶಾಲೆಯ ಹಾಜರಾತಿ ವಹಿಯಲ್ಲಿ ನಮೂದಿಸುವುದು. ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಉಪನ್ಯಾಕರ ಹುದ್ದೆಯನ್ನು ಸೃಜಿಸಿ ನೇಮಕ ಮಾಡಿಕೊಳ್ಳುವುದು. ದೈಹಿಕ ಶಿಕ್ಷಣ ಶಿಕ್ಷಕರ ಉನ್ನತ ವ್ಯಾಸಾಂಗಕ್ಕೆ ಸರ್ಕಾರದ ವತಿಯಿಂದ ಅನುಮತಿ ನೀಡುವುದು. ಪ್ರತ್ಯೇಕ ದೈಹಿಕ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಿವುದು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಆದ್ಯತಾನುಸಾರವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಉಪನಿರ್ದೇಶಕರಾದ ಚಂದ್ರಕಾಂತ ಶಾಬಾದಕರ ಅವರಿಗೂ ಕೂಡ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯ್ತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮುಕ್ತಾಬಾಯಿ ಮೋರೆ ಖಜಾಂಚಿ ಸಂಜಯ ಮೇತ್ರೆ ಜಿಲ್ಲಾ ನಿರ್ದೇಶಕರಾದ ನರಸಿಂಗ ಇಂಗಳೆ, ಪ್ರತಾಪ ಕೋಣೆ, ಶಿವಕುಮಾರ ಹಾಲಹಳ್ಳಿ, ಸುಗ್ರೀವ ಕಾಸರ, ದೇವಿದಾಸ ಮೇತ್ರೆ, ಉಮಾಕಾಂತ ಕೊಣಜೆವಾಲೆ, ಸಂಜೀವ ಬಿರಾದಾರ, ಚನ್ನವೀರ ಚಕ್ರಸಾಲಿ, ಶಬ್ಬೀರ ಪರ್ತಾಪುರೆ, ಸಂಜಯ ಬಿರಾದರ, ಅನೀಲ ಪಾಟೀಲ, ಸೂರ್ಯಕಾಂತ ಮಾಳಗೆ, ಸಾಬೀರಮಿಯಾ, ಸಂತೋಷ ಬಿರಾದಾರ, ಮಾರುತಿ ಗೊರನಾ¼,À ವಿನೋದ ಆಳ್ವಾ, ಮುಬೀನ, ರಾಜಕುಮಾರ ಕೂಡ್ಲಿಕರ, ವಿಕಾಸ ಮೊದಲಾದ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ದೈಹಿಕ ಶಿಕ್ಷಣ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಧರಣಿಯೊಂದಿಗೆ ಈ ಕ್ರೀಡಾಕೂಟದಲ್ಲಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.