ನಕಲಿ ಎಸ್.ಟಿ ಪ್ರಮಾಣ ಪತ್ರ ಪಡೆದುಕೊಳ್ಳುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಅಫಜಲಪುರ:ಆ.8: ತಾಲೂಕಿನಲ್ಲಿ ವಾಲ್ಮೀಕಿ ತಳವಾರರು ಎಂದು ಯಾರೂ ಇರುವುದಿಲ್ಲ. ಆದರೆ ಅಂಬಿಗ ಸಮುದಾಯದ ತಳವಾರರು ಪರಿಶಿಷ್ಟ ಪಂಗಡ (ಎಸ್.ಟಿ) ಮೀಸಲಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ಸಲುವಾಗಿ ಅಖಿಲ ಕರ್ನಾಟಕ ವಾಲ್ಮೀಕಿ ತಳವಾರ ಸಂಘ ಅಂತ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ನಾಯಕರ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಮಹೇಶ ನಾಯ್ಕೋಡಿ ಅವರಾದ ದೂರಿದ್ದಾರೆ.
ಗ್ರೇಡ್-2 ತಹಸೀಲ್ದಾರ್ ಶರಣಬಸಪ್ಪ ಹೊಸಮನಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಇತ್ತೀಚೆಗೆ ಜುಲೈ 29 ರಂದು ಅಖಿಲ ಕರ್ನಾಟಕ ವಾಲ್ಮೀಕಿ ತಳವಾರ ಸಂಘದ ಅಡಿಯಲ್ಲಿ ಹೋರಾಟ ಮಾಡಿ ಸರ್ಕಾರಕ್ಕೆ ಮತ್ತು ಜನರಿಗೆ ದಿಕ್ಕು ತಪ್ಪಿಸುವ ಸಲುವಾಗಿ ಈ ತರಹದ ಸಂಘವನ್ನು ಮಾಡಿಕೊಂಡು ಮನವಿ ಸಲ್ಲಿಸಿದ್ದಾರೆ.
ಆದ್ದರಿಂದ ತಾವುಗಳು ಇದನ್ನು ಮಾನ್ಯತೆ ಮಾಡದೆ ಅನುಮತಿ ನೀಡಬಾರದು. ಅಲ್ಲದೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸ್ಪಷ್ಟವಾದ ಆದೇಶ ಕ್ರ ಸಂ : 38 ರಲ್ಲಿ ಬರುವ ನಾಯಕ, ನಾಯ್ಕಡ, ವಾಲ್ಮೀಕಿ, ಬೇಡ, ಬೇಡರ ಅದೇ ಜಾತಿಯ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ಅಂತ ಸ್ಪಷ್ಟ ಆದೇಶ ಇದ್ದರೂ ಸಹ ನಮ್ಮ ತಾಲೂಕಿನ ಅಂಬಿಗ ಸಮುದಾಯದಲ್ಲಿ ತಳವಾರರು ನಾಯಕ ಜಾತಿ ಎಂದು ನಕಲಿ ಪ್ರಮಾಣ ಪತ್ರ ಪಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು ಕೂಡಲೇ
ಇದನ್ನು ಸರಿಯಾಗಿ ಪರೀಶಿಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶಾಲಾ ದಾಖಲಾತಿಗಳನ್ನು ಕಾನೂನು ಬಾಹಿರವಾಗಿ ತಿದ್ದುಪಡಿ ಮಾಡಿಸಿ ಸುಳ್ಳು ಮಾಹಿತಿ ನೀಡಿ ದಾಖಲಾತಿಗಳಲ್ಲಿ ತಳವಾರ ಅಂತ ಜಾತಿಯನ್ನು ನಮೂದಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶವನ್ನು ತಾವು ನೀಡಬೇಕು ಎಂದು ತಾಲೂಕಿನ ವಾಲ್ಮೀಕಿ, ನಾಯಕ ಸಮುದಾಯದ ವತಿಯಿಂದ ಆಗ್ರಹಿಸುತ್ತೇವೆ. ಹೀಗಾಗಿ ಈ ವ್ಯವಸ್ಥೆಯನ್ನು ಕೂಡಲೇ ಸರಿ ಮಾಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ರಾಜು ಬೇಡರ, ವಾಸು ನಾಯ್ಕೋಡಿ, ಸಿದ್ದು ನಾಯ್ಕೋಡಿ, ಬಸವರಾಜ ಜಮಾದಾರ, ಅಭಿಷೇಕ ನಾಯ್ಕೋಡಿ, ಅವಿನಾಶ ನಾಯ್ಕೋಡಿ, ಪ್ರವೀಣ ನಾಯ್ಕೋಡಿ ಅನೇಕರಿದ್ದರು.