ಯಲ್ಲಮ್ಮ ದೇವಿ ದೇವಸ್ಥಾನ ಸಂಪರ್ಕ ಸೇತುವೆ ಜಲಾವೃತ
ಅಫಜಲಪುರ:ಆ.8: ಮಹಾರಾಷ್ಟ್ರದ ಉಜನಿ ಹಾಗೂ ವೀರ ಭಟ್ಕರ್ ಜಲಾಶಯದ ಪ್ರದೇಶದಲ್ಲಿ ತೀವ್ರ ಮಳೆ ಆಗುತ್ತಿರುವ ಹಿನ್ನೆಲೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 1.25 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದರಿಂದ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಭೀಮಾ ನದಿ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ .
ಮಣ್ಣೂರ- ಭುಯ್ಯಾರ ಗ್ರಾಮದ ಮೂಲಕ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೆ ಸಂಪರ್ಕಿಸುವ ಭುಯ್ಯಾರ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿದೆ. ಬ್ಯಾರೇಜ್ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ಇದರಿಂದ ಅಫಜಲಪುರ ತಾಲೂಕಿನ ಮಣ್ಣೂರ ಹಾಗೂ ಇಂಡಿ ತಾಲೂಕಿನ ಭುಯ್ಯಾರ, ನಾಗರಳ್ಳಿ, ಖೇಡಗಿ, ರೋಡಗಿ, ಇಂಡಿ, ಲಾಳಸಂಗಿ, ರೂಗಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸ್ಥಗಿತವಾಗಿದೆ.