ಶ್ರಾವಣ ಅಮಾವಾಸ್ಯೆ :  ಗಾಣಗಟ್ಲೆ ಕೆರೆ ಶ್ರೀಮಾಯಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ.8 :- ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ದೇವರ ದರ್ಶನಕ್ಕೆ ಅನೇಕ ಭಕ್ತರು ಮುಂದಾಗುತ್ತಿದ್ದೂ ಇಂತಹ ಸಾಲಿನಲ್ಲಿ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಸಮೀಪ ಇರುವ ಗಾಣಗಟ್ಲೆ ಕೆರೆ ಮಾಯಮ್ಮ ದೇವಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತ  ಭಕ್ತರು ದೇವಿಯ ದರ್ಶನ ಪಡೆದು ವಿಶೇಷ  ಪೂಜೆ ಸಲ್ಲಿಸಿದರು.
ತಾಲೂಕಿನ ಹುಡೇಂನಲ್ಲಿರುವ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಯು ಈಗ ಪ್ರಸಿದ್ಧಿ ಪಡೆದಿದ್ದು, ಶ್ರಾವಣ ಅಮಾವಾಸ್ಯೆ ಹಿನ್ನೆಲೆ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಭಕ್ತರು ಸಲ್ಲಿಸಿದ ನೋಟಿನ ಕಾಣಿಕೆಯನ್ನು ದೇವಿಗೆ ಹಾರವಾಗಿ ಹಾಕಿ ಸಿಂಗರಿಸಲಾಗಿತ್ತು. ದೇವಿಗೆ ಪೂಜೆ, ಹರಕೆ ಸಲ್ಲಿಸಲು ತಾಲೂಕು ಹಾಗೂ ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳು ಸೇರಿ ಆಂಧ್ರಪ್ರದೇಶದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಸುಮಾರು  ಅರ್ಧ ಕಿ.ಮೀನಷ್ಟು ದೂರಕ್ಕೆ ಸಾಲುಗಟ್ಟಿ ನಿಂತು ಭಕ್ತಿ ಸಮರ್ಪಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೂ ಪೂಜಾ ಕಾರ್ಯಗಳು ನಡೆದಿದ್ದು, ಕಾರು, ಜೀಪು, ಬೈಕ್‌ಗಳು ಸೇರಿ ನಾನಾ ವಾಹನಗಳಲ್ಲಿ ಭಕ್ತರು ಆಗಮಿಸಿದ್ದರು. ದೇವಸ್ಥಾನದ ಆವರಣದಲ್ಲಿ ಹೂವು, ಹಣ್ಣು, ಕಾಯಿ ವ್ಯಾಪಾರವೂ ಜೋರಾಗಿತ್ತು. ಕಳೆದ 2-3 ತಿಂಗಳಿಂದಲೂ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಯ ದರ್ಶನಕ್ಕೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅರ್ಚಕರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮದ ಎಲ್ಲಾ ಸಮುದಾಯಗಳ ಮುಖಂಡರು ಇದ್ದರು.
ಭಕ್ತರಿಗೆ ಅನ್ನಸಂತರ್ಪಣೆ
ಹುಡೇo  ಗ್ರಾಮದ ಗಾಣಗಟ್ಲೆ ಕೆರೆ ಮಾಯಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ತಾಪಂ ಮಾಜಿ ಸದಸ್ಯ ಹುಡೇಂ ಜಿ.ಪಾಪನಾಯಕ ಮತ್ತು ಅವರ ಕುಟುಂಬದವರು ಭಕ್ತರಿಗೆ  ಅನ್ನಸಂತರ್ಪಣೆ ಆಯೋಜಿಸಿದ್ದರು. ನಾನಾ ಕಡೆಯಿಂದ ದೇವಸ್ಥಾನಕ್ಕೆ ಬಂದಿದ್ದ ಸುಮಾರು  2 ಸಾವಿರಕ್ಕೂ ಅಧಿಕ ಭಕ್ತರಿಗೆ ಗೋಧಿ ಪಾಯಸ, ಅನ್ನ ಸಾಂಬಾರ್ ನೀಡಿದ್ದಲ್ಲದೆ, ಕುಡಿವ ನೀರಿನ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿದ್ದರು. ಅನ್ನ ಸಂತರ್ಪಣೆಯಲ್ಲಿ ಹುಡೇಂ ಗ್ರಾಮದ ನಾನಾ ಸಮುದಾಯಗಳ ಯುವಕರು, ಮಹಿಳೆಯರು ಭಾಗವಹಿಸಿದ್ದರು.