ಬೆಲೆಕುಸಿತ: ಟೊಮೆಟೊ ಬೀದಿಗೆ ಚೆಲ್ಲಿ ಪ್ರತಿಭಟನೆ
ಲಕ್ಷ್ಮೇಶ್ವರ,ಆ.8: ಪಟ್ಟಣದಲ್ಲಿ ಬುಧವಾರ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಟೊಮೇಟೊ ಹಣ್ಣಿನ ಬೆಲೆ ದಿಡೀರ್ ಕುಸಿತದಿಂದ ಕಂಗಾಲಾದ ರೈತರು ಟೊಮೇಟೊ ಹಣ್ಣನ್ನು ಬೀದಿಗೆ ಚೆಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳ ಕಾಲ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳು ಹಾಳಾಗುತ್ತಿದ್ದರೆ ಮತ್ತೊಂದು ಕಡೆ ಬಂದಿರುವ ತೋಟಗಾರಿಕಾ ಉತ್ಪನ್ನಗಳಿಗೆ ಬೆಲೆಗಳ ಕುಸಿತದ ಪರಿಣಾಮ ರೈತರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.
ಬುದುವಾರ ಎಂದಿನಂತೆ ರೈತರು ಎಪಿಎಂಸಿ ಮಾರುಕಟ್ಟೆಗೆ ತರಕಾರಿಗಳನ್ನು ವಾಹನಗಳಲ್ಲಿ ಹೊತ್ತು ತಂದಿದ್ದರು ಆದರೆ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಟೊಮೆಟೊ ಹಣ್ಣಿನ ಆವಕವಾಗಿದ್ದರಿಂದ ಖರೀದಿದಾರರು ತಮ್ಮ ಅತ್ಯಂತ ಕಡಿಮೆ ದರದಲ್ಲಿ ಖರೀದಿ ಮಾಡಲು ಮುಂದಾದರು ಇದರಿಂದಾಗಿ ರೈತರು ಸಿಟ್ಟಿಗೆದ್ದರು.
ಪ್ರತಿ 25 ಕೆಜಿ ಟೊಮೇಟೊ ಹಣ್ಣಿನ ಬೆಲೆ ಕೇವಲ 50 ರಿಂದ 100 ಗಳಿಗೆ ಇಳಿದಿದ್ದರಿಂದ ಬೇಡಿಕೆಯಲ್ಲಿ ಹೆಚ್ಚಳವಾಗದ್ದರಿಂದ ಅಪಾರ ಪ್ರಮಾಣದ ಟೊಮೆಟೊ ಹಣ್ಣು ಬಂದಿದ್ದರಿಂದ ಏಕಾಏಕಿ ಬೆಲೆ ಕುಸಿತವಾಯಿತು.
ಇದರಿಂದಾಗಿ ರೈತರು ಎಲ್ಲಾ ಟೊಮೆಟೊ ಹಣ್ಣುಗಳನ್ನು ಬೀದಿಗೆ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಈ ಕುರಿತು ಗುಲಗಂಜಿ ಕೊಪ್ಪ ಗ್ರಾಮದ ಟೊಮೇಟೊ ಬೆಳೆಗಾರ ಚನ್ನಬಸಯ್ಯ ಗಡ್ಡ ದೇವರ ಮಠ ಅವರು ರೈತರು ಕಷ್ಟಪಟ್ಟು ಬೆಳೆದರೆ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ ಕಳೆದ ಅನೇಕ ದಿನಗಳಿಂದ ಹಣ್ಣುಗಳನ್ನು ಕೆಡದಂತೆ ಜೋಪಾನವಾಗಿ ಬೆಳೆಸಿದ್ದೇವೆ, ಆದರೆ ಈಗ ಏಕಾಏಕಿ ಬೆಲೆ ಕುಸಿತವಾದರೆ ರೈತರ ಬವಣೆಯನ್ನು ಕೇಳುವವರಿಲ್ಲದಂತಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ಕುರಿತು ಎಪಿಎಂಸಿ ತರಕಾರಿ ದಲ್ಲಾಳಿ ಮಂಜುನಾಥ ಹೊಗೆಸೊಪ್ಪಿನ ಪ್ರತಿಕ್ರಿಯೆ ನೀಡಿ ಬುಧವಾರ ಎಪಿಎಂಸಿ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ಟೊಮೆಟೊ ಹಣ್ಣು ಆವಕವಾಗಿದೆ ಬೇಡಿಕೆಗೆ ಅನುಗುಣವಾಗಿ ವ್ಯಾಪಾರಸ್ಥರು ಖರೀದಿಸಿದರು ಮೇಲಾಗಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರು ಅಧಿಕ ಸಂಖ್ಯೆಯಲ್ಲಿ ಟೊಮೇಟೊ ಹಣ್ಣನ್ನು ಮಾರುಕಟ್ಟೆಗೆ ತಂದಿದ್ದರಿಂದ ಬೆಲೆ ಕುಸಿಯಲು ಕಾರಣ ಎಂದು ಹೇಳಿದ ಅವರು ಎಲ್ಲಾ ಹಣ್ಣುಗಳನ್ನು ಖರೀದಿ ಮಾಡಿ ಮಾರಾಟ ಮಾಡುವಷ್ಟು ದೊಡ್ಡ ಮಾರುಕಟ್ಟೆ ನಮ್ಮದಲ್ಲ ಎಂದು ಹೇಳಿದರು.