ತಾಯಿಯ ಎದೆಹಾಲು ಮಗುವಿಗೆ ಅಮೃತವಿದ್ದಂತೆ
ಹುಬ್ಬಳ್ಳಿ,ಆ.8: ತಾಯಿಯ ಎದೆಹಾಲು ಮಗುವಿಗೆ ಅಮೃತವಿದ್ದಂತೆ. ಆದ್ದರಿಂದ ತಾಯಂದಿರು ಹೆರಿಗೆ ಆದ ಒಂದು ಗಂಟೆಯೊಳಗಾಗಿ ಮಗುವಿಗೆ ಸ್ತನ್ಯಪಾನ ಮಾಡಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಉಮಾ ಡೊಳ್ಳಿ ತಾಯಂದಿರಿಗೆ ಸಲಹೆ ನೀಡಿದರು.
ಅವರು ಹುಬ್ಬಳ್ಳಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ಯಾಹಟ್ಟಿ ವ್ಯಾಪ್ತಿಯಲ್ಲಿ ಬರುವ ಕಿರೇಸೂರ ಗ್ರಾಮದ ದ್ಯಾಮವ್ವನ ದೇವಸ್ಥಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬ್ಯಾಹಟ್ಟಿ ಹಾಗೂ ಗ್ರಾಮ ಪಂಚಾಯತ್ ಕಿರೇಸೂರ ಜಂಟಿಯಾಗಿ ಆಯೋಜಿಸಿದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಗ್ರಾಮದಲ್ಲಿ ಮಾತನಾಡಿದರು. ಪಂಚಾಯತಿಯ ಸದಸ್ಯರಾದ ನೀಲಪ್ಪ ಗಾಳಪ್ಪನವರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಯಿಯ ಹಾಲು ಪರಿಶುದ್ಧ ಹಾಗೂ ರೋಗಾಣು ರಹಿತವಾಗಿದ್ದು ಮಗುವಿಗೆ ಯಾವುದೇ ರೋಗ ಬರದಂತೆ ಅನೇಕ ಸೋಂಕುಗಳಿಂದ ವಿಶೇಷವಾಗಿ ನ್ಯೂಮೋನಿಯಾ, ಅತಿಸಾರ ಬೇಧಿಯಿಂದ ರಕ್ಷಿಸುತ್ತದೆ ಹಾಗೂ ತಡೆಗಟ್ಟುತ್ತದೆ. ಅಲ್ಲದೆ ತಾಯಿ ಮತ್ತು ಮಗುವಿನ ಮಧ್ಯ ಬಾಂಧವ್ಯ, ಮಮತೆ, ವಾತ್ಸಲ್ಯ ಹಾಗೂ ಕರುಣೆಗಳನ್ನು ಬೆಸೆÀಯುತ್ತದೆ. ಆದ್ದರಿಂದ ತಾಯಂದಿರು ಹೆರಿಗೆ ಆದ ಒಂದು ಗಂಟೆಯೊಳಗಾಗಿ ತಪ್ಪದೇ ಸ್ತನ್ಯಪಾನ ಮಾಡಿಸಬೇಕು. ಮಗುವಿಗೆ ಆರು ತಿಂಗಳವರೆಗೆ ತಾಯಿಯ ಎದೆಹಾಲು ಬಿಟ್ಟು ಬೇರೆ ಏನನ್ನೂ ಕೊಡಬಾರದು. ತಾಯಿ ಹಾಲು ಮಗುವಿಗಾಗಿ ಸಿದ್ಧಪಡಿಸಿದ ಆಹಾರವಾಗಿದ್ದು, 6 ತಿಂಗಳ ಬಳಿಕ ತಾಯಿಯ ಎದೆಹಾಲಿನ ಜೊತೆ ಪೂರಕ ಆಹಾರ ಪ್ರಾರಂಭಿಸಬೇಕು. ಒಟ್ಟಾರೆ ಮಗು 2 ವರ್ಷ ಆಗುವವರೆಗೆ ಸಂಪೂರ್ಣ ತಾಯಿಯ ಎದೆಹಾಲು ನೀಡಬೇಕು ಇದರಿಂದ ಮಗುವಿಗೆ ಯಾವುದೇ ಖಾಯಿಲೆ ಬರುವುದಿಲ್ಲ ಜೊತೆಗೆ ಮಗು ಜಾಣ ಆಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಪೂರ್ಣಿಮಾ ವಿರೇಶ, ಹುಬ್ಬಳ್ಳಿ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಅಸೋಸಿಯಟೆಡ್ ಪ್ರೋಫೆಸರ್ ಆದ ಶ್ರೀಮತಿ ವಾಣಿ ಕೆ, ಉಪನ್ಯಾಸಕರಾದ ಶ್ರೀಮತಿ ಹನ್ನಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ಶ್ರೀ ವೀರಣ್ಣ ಎಸ್. ಮೋಟಗಿ, ಸಮುದಾಯ ಆರೋಗ್ಯ ಅಧಿಕಾರಿಯಾದ ಶ್ರೀಮತಿ ಶಕುಂತಲಾ ಹೆಬ್ಬಳ್ಳಿ, ವಿದ್ಯಾರ್ಥಿಗಳು, ತಾಯಂದಿರು, ಆಶಾ ಹಾಗೂ ಅಂಗನವಾಡಿ ಕಾರ್ಯಕತೆಯರು ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಯಾದ ಶ್ರೀಮತಿ ರಾಜಶ್ರೀ ಕುಸುಲಾಪುರ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.