ಕಾಮಗಾರಿ ಪರಿಶೀಲನೆ
ಬ್ಯಾಡಗಿ,ಆ.8: ತಾಲೂಕಿನ ಹೆಡಿಗೊಂಡ, ಮಲ್ಲೂರು ಹಾಗೂ ಕಲ್ಲೇದೇವರು ಗ್ರಾಮ ಪಂಚಾಯಿತಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ ಅವರು ಭೇಟಿ ನೀಡಿ ನರೇಗಾ ಯೋಜನೆ ಅಡಿ ಮಾನವ ದಿನಗಳ ಸೃಜನೆ, ಮಹಿಳಾ ಭಾಗವಹಿಸುವಿಕೆ, ಕೂಸಿನ ಮನೆ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಗಳಿಗೆ, ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ, ಸ್ವಸಹಾಯ ಸಂಘದ ಸಂಜೀವಿನಿ ಶೆಡ್’ಗೆ, ಗ್ರಂಥಾಲಯ ಕೇಂದ್ರ ಹಾಗೂ ರಸ್ತೆ ಕಾಮಗಾರಿಗಳಿಗೆ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್’ಗೆ ಹಾಗೂ ಹೊಸ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಮೂಲಗಳ ಬಗ್ಗೆ ವಿಚಾರಿಸಿ, ಆಗಾಗ ನೀರಿನ ಪರೀಕ್ಷೆ ನಡೆಸಬೇಕು ಎಂದರಲ್ಲದೇ, ಹಾಸ್ಟೆಲ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅನುಕೂಲವಾಗಲೆಂದು ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯಕ್ಕೆ ಅವಶ್ಯಕವಿರುವ ಪುಸ್ತಕಗಳು, ಕಂಪ್ಯೂಟರ್ ಹಾಗೂ ಪೀಠೋಪಕರಣಗಳ ವ್ಯವಸ್ಥೆಯಾಗಬೇಕು. ಏನಾದರೂ ಸಮಸ್ಯೆಗಳಿದ್ದಲ್ಲಿ ಅದರ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ನಂತರ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅಲ್ಲಿನ ಬೋಧನಾ ಕ್ರಮ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ವೀಕ್ಷಿಸಿ, ಗ್ರಂಥಾಲಯ ಉತ್ತಮವಾಗಿ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್‍ಆರ್‍ಎಲ್‍ಎಂ ವರ್ಕ್ ಶೆಡ್ ಹಾಗೂ ಪಂಚಾಯಿತಿ ಕಟ್ಟಡವನ್ನು ಗುಣಮಟ್ಟದಲ್ಲಿ ನಿರ್ಮಿಸಿಕೊಳ್ಳಲು ಸಲಹೆ ನೀಡಿದರಲ್ಲದೇ, ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಪಂಚಾಯಿತಿ ಸಿಬ್ಬಂದಿ ಕಾರ್ಯನಿರ್ವಹಣೆಯ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ತಾಂತ್ರಿಕ ಸಂಯೋಜಕರಾದ ಸಂತೋಷ, ಪ್ರದೀಪ, ಐಈಸಿ ಸಂಯೋಜಕ ಅಕ್ಷಯ ದೇಶಪಾಂಡೆ, ಗ್ರಾಮ ಪಂಚಾಯತ ಪಿಡಿಓಗಳಾದ ಜಗದೀಶ ಮಣ್ಣಮ್ಮನವರ, ನಾಗರಾಜ ಹಡಗಲಿ ಹಾಗೂ ಮಲ್ಲೇಶ ಮೋಟೆನವರ ಹಾಗೂ ಸಿಬ್ಬಂದಿಗಳು ಹಾಜರಿದ್ದರು