ಕರಾಟೆ ಚಾಂಪಿಯನ್ ನಲ್ಲಿ ಹಸನೈನ್ ಗೆ ಪ್ರಶಸ್ತಿ
ಬೆಂಗಳೂರು, ಆ.೮- ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಹಮ್ಮದ್ ಹಸನೈನ್ ಅವರಿಗೆ ಚಿನ್ನದ ಪದಕ ಲಭಿಸಿದ್ದು, ಮಹತ್ತರ ಸಾಧನೆಗೆ ಪಾತ್ರರಾಗಿದ್ದಾರೆ.
ಎಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಭಾರತ, ನೇಪಾಳ, ಭೂತಾನ್, ದುಬೈ, ಶ್ರೀಲಂಕಾ ಮತ್ತು ಬಾಂಗ್ಲಾ ಸೇರಿದಂತೆ ೯ ದೇಶದ ಸ್ಪರ್ಧಿಗಳು ಭಾಗವಹಿಸಿದ್ದರು.
ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ (ಎಕೆಎಸ್‌ಕೆಎ)ನ ಕರ್ನಾಟಕ ರಾಜ್ಯ ಕ್ರೀಡಾ ಆಯೋಗದ ಉಪಾಧ್ಯಕ್ಷರಾದ ಹಾಗೂ ರಾಷ್ಟ್ರೀಯ ತೀರ್ಪುಗಾರರಾದ ರೆನ್ಶಿ ಜೈನ್ ನೇತೃತ್ವದ ಸುಡೋಕನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಪ್ರತಿನಿಧಿಸಿತ್ತು. ಈ ಚಾಂಪಿಯನ್‌ಶಿಪ್‌ನಲ್ಲಿ ಹಸನೈನ್ ಅದ್ವಿತೀಯ ಪ್ರದರ್ಶನ ನೀಡಿದರು.
ಹಸನೈನ್ ಬೆಂಗಳೂರಿನ ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಏಳು ವರ್ಷದ ಕಟಾ ವಿಭಾಗದಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈತನ ಕರಾಟೆಯಲ್ಲಿನ ಸಾಧನೆ ಮತ್ತು ಅತ್ಯುತ್ತಮ ರ್‍ಯಾಂಕಿಂಗ್‌ಗಾಗಿ ೨೫ ಸಾವಿರ ನಗದು ನೀಡಿ ಗೌರವಿಸಲಾಯಿತು.
ಎರಡು ಬಾರಿ ರಾಜ್ಯ ಚಾಂಪಿಯನ್ ಹಾಗೂ ದಕ್ಷಿಣ ಭಾರತ ಚಾಂಪಿಯನ್ ಪಡೆದಿರುವ ಕರ್ನಾಟಕದ ಅತಿ ಕಿರಿಯ ಎಂಬ ದಾಖಲೆ ಹೊಂದಿರುವ ಹಸನೈನ್‌ಗೆ ಈ ಪುರಸ್ಕಾರ ಲಭಿಸಿದೆ.