ಕೈಮಗ್ಗಗಳು ಗತವೈಭವ ಕಾಣಬೇಕು; ದೂಡಾ ಆಯುಕ್ತ ತಿಮ್ಮಣ್ಣ ಹುಲ್ಲುಮನಿ ಅಭಿಮತ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೮: ಪ್ರಸ್ತುತ ಆಧುನಿಕ ಯುಗದಲ್ಲಿ ಕೈಮಗ್ಗ ನಶಿಸುತ್ತಿದ್ದು, ಸರ್ಕಾರದಿಂದ ಅನುದಾನ ಮತ್ತು ಸೌಲಭ್ಯಗಳು ದೊರೆತರೆ ಕೈಮಗ್ಗಗಳು ಗತವೈಭವ ಕಾಣುವ ಹಾಗೆ ಮಾಡಬಹುದು ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ತಿಮ್ಮಣ್ಣ ಹುಲ್ಮನಿ ಅಭಿಪ್ರಾಯಿಸಿದರು.ದಾವಣಗೆರೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ದಾವಣಗೆರೆ ಜಿಲ್ಲಾ ನೇಕಾರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ  ಕರೂರು ಇಂಡಸ್ಟಿçಯಲ್ ಏರಿಯಾದಲ್ಲಿರುವ ಜಿಲ್ಲಾ ನೇಕಾರರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ೧೦ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಾಲ್ಯದಲ್ಲಿ ನಾನು ನಮ್ಮ ತಂದೆಯವರ ಜತೆಗೆ ನೇಕಾರಿಕೆ ಮಾಡುತ್ತಿದ್ದೆ. ಕೊಟ್ಟೂರು, ಕೂಡ್ಲಿಗೆ ಭಾಗದಲ್ಲಿ ನೇಯ್ದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದೆವು ಕೈತುಂಬ ಹಣ ಸಿಗುತ್ತಿತ್ತು. ಆಗ ನೇಕಾರಿಕೆ ಶ್ರೀಮಂತವಾಗಿತ್ತು. ಒಳ್ಳೆಯ ಜೀವನ ಸಾಗಿಸುತ್ತಿದ್ದೆವು. ನನಗೆ ಈ ಕೆಲಸ ಸಿಗದಿದ್ದರೆ ನೇಕಾರನಾಗಿಯೇ ಜೀವನ ಸಾಗಿಸುತ್ತಿದ್ದೆ ಎಂದು ಹೇಳಿದರು.ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ. ಬಸವರಾಜ್ ಮಾತನಾಡಿ, ಸಮಾಜ ಒಂದುಗೂಡಿದರೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ನೇಕಾರ ಸಮಾಜದವರು ಉತ್ತಮ ಸ್ಥಾನ ಹೊಂದಬಹುದು. ಈಗಿರುವ ಪರಿಸ್ಥಿತಿಯಲ್ಲಿ ನೇಕಾರರ ಸವಲತ್ತುಗಳನ್ನು ಬೇರೆ ಸಮಾಜದವರು ಪಡೆಯುತ್ತಿದ್ದಾರೆ. ಆದ್ದರಿಂದ ನಮ್ಮ ಸಮಾಜದ ಕುಲ ಕಸುಬವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.ದಾವಣಗೆರೆ ಜಿಲ್ಲಾ ನೇಕಾರ ಒಕ್ಕೂಟದ ಗೌರವಾಧ್ಯಕ್ಷ ಗುಬ್ಬಿ ಬಸವರಾಜ್, ವೆಂಕಟೇಶ್, ಡಿ.ಎಸ್. ಪರಶುರಾಮ್, ಶ್ರೀನಿವಾಸ್ ಇಂಡಿ, ಧರ್ಮರಾಜ್, ಶ್ರೀಧರ್ ಮೂರ್ತಿ ಉಪಸ್ಥಿತರಿದ್ದರು.