ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅಮಾಯಕರಲ್ಲ
ಸಂಜೆವಾಣಿ ನ್ಯೂಸ್
ಮೈಸೂರು: ಆ.08:- ಮುಡಾ ಹಗರಣದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅಮಾಯಕರಲ್ಲ ಎಂದು ಎಂದು ಎಂಎಲ್‍ಸಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದು ಹೇಳಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ಲೂಟಿ ಕಳಂಕವಲ್ಲವೆ? ಅಲ್ಪಸಂಖ್ಯಾತ ಕಲ್ಯಾಣ ಇಲಾಕೆಯಲ್ಲಿ ಕಾನೂನು ಉಲ್ಲಂಘಿಸಿ ಒಂದೇ ಕಂಪನಿಗೆ 600 ಕೋಟಿ ಟೆಂಡರ್ ನೀಡಿರುವುದು, ಎಲ್ಲಾ ಇಲಾಖೆಯಲ್ಲೂ ಪ್ರತಿ ಹುದ್ದೆಗೆ ರೇಟ್ ಕಾರ್ಡ್ ನಿಗದಿ ಮಾಡಿರುವುದು ಆಡಳಿತದ ಕಪ್ಪು ಚುಕ್ಕೆ ಅಲ್ಲವೆ? ಸಾರ್ವಜನಿಕ ಬದುಕು ಸ್ವಚ್ಛವಾಗಿದ್ದರೆ ಕಳಂಕವಿಲ್ಲದ ಆಡಳಿತ ಎನ್ನಬಹುದು. ಆದರೆ ನಿಮ್ಮ ಆಡಳಿತ ಸ್ವಚ್ಛವಾಗಿದೆಯೇ? ಭ್ರಷ್ಟಾಚಾರ ಏನನ್ನು ಸೂಚಿಸುತ್ತದೆ? ಅಧಿಕಾರಕ್ಕೆ ಬಂದ ನಂತರ ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ರಚಿಸಿದಿರಿ. ನಿಮ್ಮ ಸರ್ಕಾರದ ಮೇಲೆ ಬರುವ ಆರೋಪ ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿದಿರಿ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಮಿಸ್ಟರ್ ಕರಫ್ಟ್: ಸಿದ್ದರಾಮಯ್ಯ ಮಿಸ್ಟರ್ ಕ್ಲೀನ್ ಅಲ್ಲ, ಮಿಸ್ಟರ್ ಕರಫ್ಟ್. ಮುಡಾ ಹಗರಣದಲ್ಲಿ ಅವರು ಅಮಾಯಕರೂ ಅಲ್ಲ. ಕೆಸರೆ ಸರ್ವೇ ನಂಬರ್ 464ರ ಜಾಗ 1997ರಲ್ಲಿ ನೋಟಿಫಿಕೇಷನ್ ಆಗಿತ್ತು. 1998ರಲ್ಲಿ ಡಿನೋಟಿಫಿಕೇಷನ್ ಹೇಗಾಯ್ತು? ನೋಟಿಫಿಕೇಷನ್ ಆಗಿರುವ ಜಾಗ ಡಿನೋಟಿಫೈ ಆಗಲ್ಲ. ಡಿನೋಟಿಫಿಕೇಷನ್ ಮಾಡಿದ ಪ್ರಭಾವಿ ಯಾರು? ನನ್ನ ಪ್ರಕಾರ ನೀವೇ ಆ ಪ್ರಭಾವಿ ವ್ಯಕ್ತಿ. ಆಗ ನೀವು ಉಪಮುಖ್ಯಮಂತ್ರಿ, ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದಿರಿ. ಪ್ಲ್ಯಾನ್ ಮಾಡಿಯೇ ಅಭಿವೃದ್ಧಿ ಆಗಿರುವ ಜಾಗವನ್ನು ಡಿನೋಟಿಫಿಕೇಷನ್ ಮಾಡಿಸಿದ್ದೀರಿ. ಜಮೀನು ಖರೀದಿಸುವ ಮೊದಲೇ ಬಡಾವಣೆ ಮಾಡಲಾಗಿತ್ತು. 2003ರಿಂದಲೇ ನಿವೇಶನ ಹಂಚಿಕೆಯಾಗಿ ಕ್ರಯಪತ್ರ ನೋಂದಣಿಯಾಗಿದೆ. ನೈತಿಕತೆಯ ಪ್ರಶ್ನೆ ಬಂದರೂ ಬಡಾವಣೆಯನ್ನು ಡಿನೋಟಿಫೈ ಮಾಡಿದ್ದು ಮೊದಲ ತಪ್ಪು, ಖರೀದಿ ಮಾಡಿದ್ದು ಎರಡನೇ ತಪ್ಪು. ಇದರಲ್ಲಿ ದಲಿತರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಸಿದ್ದರಾಮಯ್ಯ ರೀಡು ಪಿತಾಮಹಾ: ಅರ್ಕಾವತಿ ಬಡಾವಣೆಯಲ್ಲಿ 880 ಎಕರೆ ರೀಡು ಮಾಡಿದ್ದು ಯಾರು? ಅದಕ್ಕೆ ಪಿತಾಮಹರೇ ಸಿದ್ದರಾಮಯ್ಯ. ಕೆಂಪಣ್ಣ ಆಯೋಗ ನೀಡಿದ ವರದಿಯಲ್ಲಿ ಅಕ್ರಮ ಆಗಿರುವುದು ಸತ್ಯ ಎಂದು ಉಲ್ಲೇಖವಾಗಿದೆ. ನ್ಯಾಯಾಲಯದ ನಿರ್ದೇಶನ ಮೀರಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ವರದಿ ಮಾಡಿದೆ. ಯಾಕೆ ಅದನ್ನು ಜಾರಿ ಮಾಡಿಲ್ಲ? ತಮ್ಮ ಬುಡಕ್ಕೆ ಬರುತ್ತದೆ ಎಂಬ ಭಯವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಭ್ರಷ್ಟಾಚಾರದ ಪೋಷಕ: ಮುಡಾ ಹಗರಣದಲ್ಲಿ ಸ್ವಜನಪಕ್ಷಪಾತ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಿದ್ದರಾಮಮಯ್ಯ ಭ್ರಷ್ಟಾಚಾರದ ಪೋಷಕ. ಜತೆಗೆ ಫಲಾನುಭವಿವೂ ಹೌದು. ಅವರಿಗೆ ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇದ್ದರೆ ಪ್ರತಿಪಕ್ಷಗಳ ಆರೋಪಕ್ಕೆ ಸದನದಲ್ಲೇ ಉತ್ತರಿಸುತ್ತಿದ್ದರು. ಅಲ್ಲಿ ಫಲಾಯನ ಮಾಡಿ, ಹೊರಗಡೆ ಬಂದು ಜನಾಂದೋಲನ ಸಭೆ ಮಾಡುತ್ತಿದ್ದಾರೆ. ಸತ್ಯ ಎದುರಿಸುವ ದೈರ್ಯ ಇದ್ದರೆ ಅಲ್ಲೇ ಉತ್ತರ ಕೊಡುತ್ತಿದ್ದರು. ಫಲಾನುಭವಿಯಾಗಿರುವ ಕಾರಣಕ್ಕೆ ಫಲಾಯನ ಮಾಡಿದ್ದಾರೆ. ಸಿಎಂ ಆಗಿ ನೀವೇ ನಾನು ತಪ್ಪೇ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡರೆ ನೀವೇ ರಚಿಸಿರುವ ನ್ಯಾಯಾಧೀಶರ ಆಯೋಗ ಆಪಾದಿತ ಎಂದು ಹೇಳುತ್ತದೆಯೇ ಎಂದು ವ್ಯಂಗ್ಯವಾಡಿದರು.
2017ರಲ್ಲಿ 50:50 ನಿವೇಶನ ಕೊಡಬೇಕು ಎಂಬ ಆದೇಶ ಜಾರಿಯಾದಾಗ ನಮ್ಮ ಸರ್ಕಾರ ಇರಲಿಲ್ಲ. 2021ರಲ್ಲಿ ಅಂದಿನ ಮುಡಾ ಆಯುಕ್ತರು ಸರ್ಕಾರದ ಅನುಮತಿಯನ್ನೂ ಪಡೆಯದೆ ಸಿದ್ದರಾಮಯ್ಯ ಪತ್ನಿಗೆ ನಿವೇಶನ ನೀಡಿ ಭ್ರಷ್ಟಾಚಾರದ ಪಾಲುದಾರರಾಗಿ ಮಾಡಿಕೊಂಡಿದ್ದಾರೆ. ನಿವೇಶನ ವಾಪಸ್ ಕೊಡಿ ಎಂದು ಕೇಳಿದಾಗ 62 ಕೋಟಿ ಪರಿಹಾರ ಕೇಳಿದ್ದಾರೆ. ನಿಮ್ಮಂತೆಯೇ ರಾಜ್ಯದೆಲ್ಲೆಡೆ ಪರಿಹಾರಕ್ಕಾಗಿ ಲಕ್ಷಾಂತರ ರೈತರು ಕಾಯುತ್ತಿದ್ದಾರೆ. ಅವರಿಗೊಂದು ನ್ಯಾಯ, ನಿಮಗೊಂದು ನ್ಯಾಯವೆ? ನೀವು ಕೇಳಿದ ಮಾದರಿಯಲ್ಲೇ ಬೇರೆ ರೈತರಿಗೂ ಪರಿಹಾರ ಕೊಡಿ. ನಿಮ್ಮಂತೆಯೇ ಪರಿಹಾರ ಪಡೆದವರ ಪಟ್ಟಿಯನ್ನೂ ಬಿಡಿಗಡೆ ಮಾಡಿ ಎಂದು ಒತ್ತಾಯಿಸಿದರು.
ನಮ್ಮ ಪಾದಯಾತ್ರೆ ಜನಾಂದೋಲನವಾಗಿ ರೂಪುಗೊಂಡಿದೆ. ಆಡಳಿತ ಪಕ್ಷ ಜನ ಬೆಂಬಲ ನೋಡಿ ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟ, ಹೈಕಮಾಂಡ್ ಗಾಬರಿಗೊಂಡು ಬೆದರಿಕೆ ತಂತ್ರ ಅನುಸರಿಸುತ್ತಿದೆ. ನಮ್ಮ ಪಾದಯಾತ್ರೆ ಭ್ರಷ್ಟಾಚಾರ, ವಾಲ್ಮೀಕಿ ನಿಗಮದ ಹಗರಣ, ಕಾಂಗ್ರೆಸ್ ಲೂಟಿಯ ವಿರುದ್ಧ. ಮುಡಾ ಸೇರಿದಂತೆ ವಿವಿಧ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಎಂದರು.
ಆರ್‍ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟಾಕ್ಷಣ ಅವರ ಹಳೆ ಕೇಸ್‍ಗಳಿಗೆ ಜೀವ ಕೊಟ್ಟಿದ್ದಾರೆ. ಇದು ಸಿದ್ದರಾಮಯ್ಯ ಹೆದರಿರುವುದನ್ನು ತೋರಿಸುತ್ತದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಯಡಿಯೂರಪ್ಪ, ಕುಮಾರಸ್ವಾಮಿ ಮೇಲೆ ಬೊಟ್ಟು ಮಾಡುವುದು ಸರಿಯಲ್ಲ ಎಂದರು.