ನಾಗರಚೌತಿ ಕಲ್ಲಿನ ನಾಗರ ಹುತ್ತಿಗೆ ಹಾಲೆರೆದ ಭಕ್ತರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,8- ಶ್ರಾವಣ ಮಾಸ ಬಂದರೆ ಹಬ್ಬಗಳು ಆರಂಭವಾದಂತೆ. ಅದರಲ್ಲಿ ಈ ಮಾಸದ ಮೊದಲ ಹಬ್ಬ ನಾಗರಚೌತಿ ಹಬ್ಬ ಇಂದು. ಇದಕ್ಕಾಗಿ ಭಕ್ತ ಸಮೂಹ ದೇವಸ್ಥಾನಗಳಲ್ಲಿ ಪ್ರತಿಷ್ಟಾಪಿಸಿರುವ ಕಲ್ಲಿನ ನಾಗದೇವತೆ, ಇಲ್ಲ ಹುತ್ತಗಳ ಬಳಿ ತೆರಳಿ ಪೂಜೆ ಮಾಡಿ, ತಂಬಿಟ್ಟು, ಎಳ್ಳು ಚಿಗಳೆ ಮೊದಲಾದವುಗಳ ಎಡೆ ಮಾಡಿ, ಕೊಬ್ಬರಿ ಬಟ್ಟಲದಿಂದ ಹಾಲು ಎರೆದು ತಮ್ಮ ಭಕ್ತಿ ಅರ್ಪಿಸಿದರು.
ಇನ್ನು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಈ ನಾಗರ ಹಬ್ಬಕ್ಕೆ ತವರು ಮನೆಗೆ ಬಂದು ಹಾಲು ಎರೆಯುವುದು ವಿಶೇಷ.
ತಂಬಿಟ್ಟು, ವಿವಿಧ ಉಂಡಿ ತಿಂದ ಜನತೆ ಬಹುತೇಕ ಹಳ್ಳಿಗಳಲ್ಲಿ ಮರಕ್ಕೆ ಜೋಕಾಲಿ ಕಟ್ಟಿ  ಹಾಡಿ ನಲಿಯುತ್ತಾರೆ. ಇದು ಈಗ ಯಾಂತ್ರಿಕ ಬದುಕಿನ ನಡುವೆ ಒಂದಿಷ್ಟು ಕಡಿಮೆಯಾಗಿದೆ ಎನ್ನಬಹುದು. ಆದರೆ ಬಹುತೇಕ ಎಲ್ಲಾ ಮನೆಗಳಲ್ಲಿ ನಾಗರ ಹಬ್ಬದ ನೆಪದಲ್ಲಿ ಉಂಡಿಕಟ್ಟಿ ತಿನ್ನುವುದು ಮಾತ್ರ ಇನ್ನು ಕಡಿಮೆಯಾಗಿಲ್ಲ.