ಮುಡಾದಲ್ಲಿ ಮುಂದುವರೆದ ಭ್ರಷ್ಟಾಚಾರ ಕಾಂಡ
ಸಂಜೆವಾಣಿ ನ್ಯೂಸ್
ಮೈಸೂರು: ಆ.08:- ಬೆಂಗಳೂರು ನಗರ ಹೊರತುಪಡಿಸಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ನಂತರದ ಸ್ಥಾನದಲ್ಲಿರುವ ಮೈಸೂರು ನಗರದಲ್ಲಿ ಕೇವಲ 3 ಲಕ್ಷ ರೂ.ಗೆ 5080 ಅಡಿ ನಿವೇಶನ ಲಭ್ಯವಿದೆ. ಅದೂ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದಲೇ ನೋಂದಣಿ ಆಗಲಿದೆ.! ಇದು ನಂಬಲಿಕ್ಕೆ ಅಸಾಧ್ಯವೆನಿಸಿದರೂ, ನಂಬಲೇಬೇಕಾದಂತಹ ಪ್ರಕರಣವೊಂದು ಮೈಸೂರಿನಲ್ಲಿ ಘಟಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು, ನಗರದ ಪ್ರತಿಷ್ಠಿತ ಹಂಚ್ಯಾ-ಸಾತಗಳ್ಳಿ ಬಡಾವಣೆ ಬಿ ವಲಯದಲ್ಲಿ ರಿಂಗ್ ರಸ್ತೆಗೆ ಅಭಿಮುಖವಾಗಿರುವ ಕಾರ್ನರ್ ಸೈಟ್ ಪಕ್ಕದ 5080 ಅಡಿ ನಿವೇಶನವನ್ನು ವ್ಯಕ್ತಿಯೊಬ್ಬರಿಗೆ ಕೇವಲ 3.03,000 ರೂ. ಗಳಿಗೆ ಹಂಚಿಕೆ ಮಾಡಿದ್ದಾರೆ.
2024ರ ಮೇ 22ರಂದು ಮೈಸೂರಿನ ಸಿದ್ಧಾರ್ಥನಗರದ ಮೋಕ್ಷ ಮಾರ್ಗ 10ನೇ ಕ್ರಾಸ್ ನಿವಾಸಿ ನಾಗರಾಜು ಅವರ ಮಗ ಎಂ.ಎನ್.ನಂದೀಶ ಎಂಬುವರ ಹೆಸರಿಗೆ ಹಂಚ್ಯಾ-ಸಾತಗಳ್ಳಿ ಬಿ ವಲಯ ಬಡಾವಣೆಯಲ್ಲಿರುವ 36ನೇ ಸಂಖ್ಯೆಯ ಪೂರ್ವ-ಪಶ್ಚಿಮ 24 ಮೀ. ಮತ್ತು ಉತ್ತರ-ದಕ್ಷಿಣಕ್ಕೆ 15 ಮೀ. (5080 ಅಡಿ) ಒಟ್ಟು 360 ಚದರ ಮೀಟರ್ ವಿಸ್ತೀರ್ಣದ ರಿಂಗ್ ರಸ್ತೆಗೆ ಅಭಿಮುಖವಾಗಿರುವ ಮೂಲೆ ನಿವೇಶನ ಪಕ್ಕದ ನಿವೇಶನಕ್ಕೆ ಕ್ರಯಪತ್ರ ನೀಡಲಾಗಿದೆ. ಮುಡಾ ಕಚೇರಿಯಲ್ಲಿರುವ ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಎಂ.ಎನ್.ನಂದೀಶ ಎಂಬುವರಿಗೆ ಸದರಿ ನಿವೇಶನದ ಕ್ರಯಪತ್ರವನ್ನು ಮೇ 22ರಂದೇ ನೋಂದಣಿ ಮಾಡಿಕೊಟ್ಟಿದ್ದಾರೆ. 2024ರ ಮೇ 16ರಂದು ನಿವೇಶನ ಹಂಚಿಕೆ ಮಾಡಲಾಗಿದ್ದು, ಕೇವಲ 6 ದಿನಗಳಲ್ಲಿ ಅಂದರೆ ಮೇ 22ರಂದೇ ಕ್ರಯಪತ್ರ ನೋಂದಣಿ ಮಾಡಿಕೊಡಲಾಗಿದೆ. ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ವಾಣಿಜ್ಯ ಬಳಕೆಗೆ ಅನುಕೂಲವಾದ 50×80 ಅಡಿ ಅಳತೆಯ ನಿವೇಶನವನ್ನು ಹಂಚಿಕೆ ಮಾಡಿರುವ ಜತೆಗೆ ಖರೀದಿದಾರರಿಗೆ ಎಲ್ಲಾ ಸ್ವತಂತ್ರ ವಿಶೇಷಾಧಿಕಾರ, ಅನುಭೋಗ, ಸ್ವಾಧೀನ ನೀಡಲಾಗಿದೆ. ಹಾಗೂ ಸ್ವತ್ತಿಗೆ ಸೇರಿದ ಪೂರ್ವಾಧಿಗಳು, ಕಾನೂನುಬದ್ಧ ಹೊರದೂಡುವಿಕೆ, ತೆರಿಗೆ, ಬಾಕಿ ಮತ್ತು ಯಾವುದೇ ರೀತಿಯ ಕ್ಲೇಮುಗಳಿಂದ ಮುಕ್ತವಾಗಿಸಿ ಸಂಪೂರ್ಣ ಹಕ್ಕು, ಮಾಲೀಕತ್ವ ನೀಡಲಾಗಿದೆ ಎಂದು ನೋಂದಾಯಿತ ಕ್ರಯಪತ್ರದಲ್ಲಿ ನಮೂದಿಸಲಾಗಿದೆ. ಹಂಚ್ಯಾ-ಸಾತಗಳ್ಳಿ ಬಿ ವಲಯ ಬಡಾವಣೆ (ವಿಟಿಯು ಬಳಿ) ರಿಂಗ್ ರಸ್ತೆಯಲ್ಲಿರುವ ನಿವೇಶನ ಸಂಖ್ಯೆ 35ರ ಚೆಕ್ಕುಬಂದಿ ಪೂರ್ವಕ್ಕೆ ನಿ. ಸಂ. 40 ಮತ್ತು 39, ಪಶ್ಚಿಮಕ್ಕೆ ರಿಂಗ್ ರಸ್ತೆ, ಉತ್ತರಕ್ಕೆ ನಿ. ಸಂಖ್ಯೆ 37 ಆಗಿದೆ. ಅಧಿಸೂಚನೆ ಇಲ್ಲದೆ ಹಂಚಿಕೆ: ಹೊಸ ಬಡಾವಣೆ ರಚಿಸಿದಾಗ ನಿವೇಶನ ಹಂಚಿಕೆಗಾಗಿ ಸುದ್ದಿ ಮಾಧ್ಯಮದಲ್ಲಿ, ವೆಬ್‍ಸೈಟ್ ಮೂಲಕ ಅಧಿಸೂಚನೆ ಪ್ರಕಟಿಸಿ, ಅರ್ಜಿಗಳನ್ನು ಆಹ್ವಾನಿಸಿ ನಿಯಮಾನುಸಾರ ಅರ್ಹ ಆಕಾಂಕ್ಷಿಗಳಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) ನಿಯಮ 1991 ಹೇಳುತ್ತದೆ. ಆದರೆ, ಆರ್.ಟಿ.ನಗರ ಮತ್ತು ಲಲಿತಾದ್ರಿಪುರ ವಸತಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿದ ಬಳಿಕ ಕಳೆದ ಈವರೆಗೆ ಮುಡಾ ಯಾವ ಹೊಸ ಬಡಾವಣೆಯನ್ನೂ ರಚಿಸಿಲ್ಲವೆಂದ ಮೇಲೆ 2024ರ ಮೇ 16ರಂದು ನಂದೀಶ ಎಂಬುವರಿಗೆ ನಿವೇಶನ ಹಂಚಿಕೆ ಪತ್ರವನ್ನು ಯಾವ ನಿಯಮದಡಿ ನೀಡಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸಭೆ ಗಮನಕ್ಕೂ ತಂದಿಲ್ಲ: ಪ್ರತಿಷ್ಠಿತ ಬಡಾವಣೆಯ ಕೋಟ್ಯಾಂತರ ರೂ. ಬೆಲೆ ಬಾಳುವ ನಿವೇಶನ ಹಂಚಿಕೆ ಮಾಡುವ ಮೊದಲು ಮುಡಾ ಸಾಮಾನ್ಯ ಸಭೆ ಮುಂದಿಟ್ಟು ಚರ್ಚಿಸಿಲ್ಲ ಅಥವಾ ನಿವೇಶನ ಹಂಚಿಕೆಗೆ ಕಾರಣ ನೀಡಿಲ್ಲ. ಯುದ್ಧದಲ್ಲಿ ಹೋರಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮನ ಪತ್ನಿ ಪರಿಪರಿಯಾಗಿ ಬೇಡಿಕೊಂಡರೂ, ನಾಲ್ಕು ವರ್ಷಗಳಿಂದ ಸತಾಯಿಸಿ ಕಡೆಗೆ ಮುಂದೆ ಅಧಿಸೂಚನೆ ಹೊರಡಿಸಿದಾಗ ಆದ್ಯತೆ ಮೇಲೆ ಪರಿಗಣಿಸಲಾಗುವುದೆಂದು ಹಿಂಬರಹ ನೀಡಿ ಅಮಾನವೀಯತೆ ಪ್ರದರ್ಶಿಸಿರುವ ಮುಡಾ ಅಧಿಕಾರಿಗಳು, ನಂದೀಶ ಎಂಬುವರಿಗೆ 5080 ಅಡಿ ಅಳತೆಯ ನಿವೇಶನ ನೀಡಿರುವ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.