ಸರಣಿ ಸಮಸ್ಯೆಗಳ ಆಗರ: ಚಾಮರಾಜನಗರ ಮುಖ್ಯಮಂತ್ರಿ ಬಂದು ತಿಂಗಳಾದರೂ ನಿರ್ಮಾಣವಾಗದ ರಸ್ತೆ ಮುಗಿಯದ ನಗರಸಭೆ ದುರವಸ್ಥೆ
ಸಂಜೆವಾಣಿ ವಾರ್ತೆ
ಹನೂರು ಆ 8 :- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಧಿಕಾರದ ಆಸೆಗೆ ಜೋತು ಬೀಳದೆ ತಿಂಗಳಿಗೊಮ್ಮೆಯಂತೆ ಶಾಪಗ್ರಸ್ತ ಚಾಮರಾಜನಗರಕ್ಕೆ ಛಲ ಬಿಡದ ತ್ರಿವಿಕ್ರಮನಂತೆ ಪ್ರವಾಸ ಮಾಡುತ್ತಿದ್ದರು ಸಹ ಜಿಲ್ಲೆಯ ಸ್ಥಳೀಯ ಆಡಳಿತ ಮಾತ್ರ ಗಾಢ ನಿದ್ರೆಗೆ ತಲುಪಿದಂತಿದೆ.
ಕಳೆದ ತಿಂಗಳಷ್ಟೆ ಸ್ಥಳೀಯ ಸಂಸದ ಸುನೀಲ್ ಬೋಸ್ ರವರ ಲೋಕಸಭಾ ಚುನಾವಣಾ ವಿಜಯದ ಅಭಿನಂದನಾ ಸಭೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಮರಾಜನಗರ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಕಾರ್ಯಕರ್ತರ ಹಾಗು ಜಿಲ್ಲೆಯ ಜನತೆಯ ಹರ್ಷೋದ್ಘಾರದ ಸಂತಸದಿ ಅದ್ದೂರಿ ಜನೋತ್ಸಾಹದಿ ಮರಳಿದ್ದರು.
ಕಾರ್ಯಕ್ರಮಕ್ಕೆ ಕಾಂಗ್ರೆಸ್‍ನ ಸಚಿವ ಬಣದ ಅತಿರತ ಮಹಾರಥರ ಆಗಮನ ಮತ್ತಷ್ಟು ಜನಸಂಭ್ರಮವನ್ನು ಮಗದಷ್ಟು ಕಳೆಗಟ್ಟುವಂತೆ ಮಾಡಿತ್ತು. ಸ್ಥಳೀಯ ಸಂಸ್ಥೆಯ ಸಮರೋಪಾದಿಯ ಶ್ರಮ , ಆಡಳಿತಾಧಿಕಾರಿಯಿಂದ ಹಿಡಿದು ಪ್ರತಿ ಪೌರಕಾರ್ಮಿಕರ ಪರಿಶ್ರಮ ಜಿಲ್ಲಾ ಕ್ರೀಡಾಂಗಣದ ಆಜುಬಾಜಿನ ಪ್ರದೇಶ ಅಚ್ಚು ಕಟ್ಟಾಗಿತ್ತು. ಇದರ ನಡುವೆ ಜಿಲ್ಲಾ ಪೆÇೀಲೀಸ್ ಭವನದ ಬಳಿಯ ಮಹದೇಶ್ವರ ಬಡಾವಣೆಯ ಮುಖ್ಯ ರಸ್ತೆಯಿಂದ ಹಳೆಯ ರಿಂಗ್ ರೋಡ್ ರಸ್ತೆಯ ಸೇರುವ 200/ ಮೀಟರ್ ರಸ್ತೆ ಡಾಂಬರೀಕರಣಕ್ಕೆ ಸಜ್ಜಾಗುತ್ತಿತ್ತು. ಅದಾವ ಶಕ್ತಿಗೆ ಅಥವಾ ಒತ್ತಡಕ್ಕೆ ಸಿಲುಕಿತೋ ಸ್ಥಳೀಯ ಆಡಳಿತ ನಗರಸಭೆ ತಿಳಿಯುತ್ತಿಲ್ಲ ಇಂದಿಗೆ ಒಂದು ತಿಂಗಳಾದರೂ ಸಹ ಡಾಂಬರು ಕಾಣದೆ ಹಳೆಯ ಮೂಲ ಸ್ಥಿತಿಗೆ ಮರಳಿದ ರಸ್ತೆ ದುರಾಡಳಿತಕ್ಕೆ ಮೂಕ ಸಾಕ್ಷಿಯಾಗಿ ಯಥಾ ಸ್ಥಿತಿಯಲ್ಲಿ ವ್ಯವಸ್ಥೆಯನ್ನು ಅಣಕಿಸುತ್ತಾ ನಿಂತಿದೆ.
ಜಿಲ್ಲಾ ಕೇಂದ್ರಕ್ಕೆ ಆಡಳಿತ ಸರ್ಕಾರದ ಮುಖ್ಯಮಂತ್ರಿಗಳು , ಸಚಿವರು , ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಬಂದಾಗ ಮಾತ್ರ ಪುಟಿದೆದ್ದು ಸ್ವಚ್ಚತಾ ಕಾರ್ಯಗಳು ಹಾಗೂ ರಸ್ತೆ ರಿಪೇರಿ ಮಾಡುವ ನಮ್ಮೂರಿನ ನಗರಸಭೆ ಉಳಿದ ಸಮಯದಲ್ಲಿ ಕುಂಭಕರ್ಣ ನಿದ್ದೆಗೆ ಜಾರಿದಂತಿರುವುದು ನಗರಸಭೆಯ ಆಡಳಿತ ವೈಖರಿಗೆ ಕನ್ನಡಿ ಹಿಡಿದಂತಿದೆ.
ಶ್ರೀ ವೀರಭದ್ರೇಶ್ವರ ದೇವಾಲಯದ ಎಡಭಾಗದಿಂದ ಕ್ರೀಡಾಂಗಣದ ಎದುರಿನ ರಸ್ತೆಯ ಮೂಲಕ ಸಂಚಾರಿ ಪೆÇೀಲಿಸ್ ಠಾಣೆಯ ಮುಂಭಾಗದಿಂದ ಮಹದೇಶ್ವರ ಬಡಾವಣೆ ಕಡೆಗೆ ತೆರಳುವ ಮುಖ್ಯ ರಸ್ತೆ ಹದಗೆಟ್ಟಿದೆ ಅಲ್ಲದೆ ರಾತ್ರಿ ವೇಳೆ ಬೀದಿ ದೀಪಗಳೂ ಸಹ ಕಾರ್ಯ ನಿರ್ವಹಿಸದೆ ಅಲ್ಲೊಂದು ಇಲ್ಲೊಂದು ಎಂಬಂತೆ ಇದ್ದು ಗಾಡಾಂಧಕಾರದಲ್ಲಿ ಮುಳುಗಿದೆ. ಅಭಿವೃದ್ಧಿಯ ಹರಿಕಾರ , ದೀನದಲಿತರ ಅಹಿಂದ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರೆ ನಿಮ್ಮ ಆಗಮನದಿಂದಾದರು ಈ ರಸ್ತೆಗೆ ಡಾಂಬರು ಕಾಣಲಿ ಹಾಗು ರಾತ್ರಿ ಸಂಚಾರಕ್ಕೆ ಸುಗಮವಾಗುವಂತೆ ಬೀದಿದೀಪ ವ್ಯವಸ್ಥೆ ಯಾಗಲಿ ನಿಮ್ಮ ಆಗಮನ ಚಾಮರಾನಗರದಂತಹ ಶಾಪಗ್ರಸ್ತ ಜಿಲ್ಲಾ ಕೇಂದ್ರಕ್ಕೆ ಅಭಿವೃದ್ಧಿಯ ನಾಂದಿಯಾಗಲಿ, ಸ್ಥಳೀಯ ಆಡಳಿತ ಚುರಕಾಗುವಂತಹ ದಕ್ಷ ಆಡಳಿತ ನಿಮ್ಮದಾಗಿರಲಿಎಂದು ಆಶಿಸೋಣವೆ.