ಸಾರಿಗೆ ಬಸ್ ಡಿಕ್ಕಿ: ಮಹಿಳೆ ಸಾವು
ಸಂಜೆವಾಣಿ ವಾರ್ತೆ
ಹನೂರು ಆ 8 :- ರಸ್ತೆ ದಾಟುವಾಗ ಸಾರಿಗೆ ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕಾಮಗೆರೆ ಗ್ರಾಮದ ಮುಖ್ಯ ರಸ್ತೆಯ ಹೋಲಿ ಕ್ರಾಸ್ ಆಸ್ಪತ್ರೆಯ ಮುಂಭಾಗ ಬುಧವಾರ ಮಧ್ಯಾಹ್ನದ ನಡೆದಿದೆ.
ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ಮುಳ್ಳಪ್ಪ ಎಂಬುವರ ಪತ್ನಿ ನಮೀತಾ (24) ಮೃತ ದುರ್ದೈವಿ ಯಾಗಿದ್ದಾರೆ.
ಕೊಳ್ಳೆಗಾಲ ತಾಲೂಕಿನ ಕಾಮಗೆರೆ ಗ್ರಾಮದ ಹೋಲಿ ಕ್ರಾಸ್ ಆಸ್ಪತ್ರೆಯ ಮುಂಭಾಗ ಬಸ್ ನಿಲ್ದಾಣದಲ್ಲಿ ತಮ್ಮ ಊರಿಗೆ ತೆರಳಲು ನಿಂತಿದ್ದ ನಮೀತಾ ಅವರು ಎದುರುಗಡೆ ರಸ್ತೆಗೆ ದಾಟುವಾಗ (ಕೆ.ಎ10 ಎಫ್ 0413) ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ನೋವಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ವಿವರ:- ನಮೀತಾ ಅವರು ಆರೋಗ್ಯದಲ್ಲಿ ಏರುಪೇರು ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತನ್ನ ಒಂದುವರೆ ವರ್ಷದ ಮಗುವಿನ ಪತಿ ಮುಳಪ್ಪ ಮತ್ತು ತಾಯಿಯ ಜೊತೆ ಹೋಲಿ ಕ್ರಾಸ್ ಆಸ್ಪತ್ರೆಗೆ ಬಂದಿದ್ದಾರೆ. ಚಿಕಿತ್ಸೆ ಪಡೆದ ನಂತರ ತಮ್ಮ ಊರಿಗೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದು ಎದುರುಗಡೆ ರಸ್ತೆಯಲ್ಲಿ ಬಸ್ ಹತ್ತಲು ರಸ್ತೆ ದಾಟುವಾಗ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ತಕ್ಷಣ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ನಂತರ ಮೃತ ದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ನೀಡಲಾಗಿದೆ.
ಬಸ್ ತಡೆದು ದಿಢೀರ್ ಪ್ರತಿಭಟನೆ: ಹಂಪ್ಸ್ /ಬ್ಯಾರಿಕೆಟ್ ಅಳವಡಿಸಲು ಆಗ್ರಹ
ಸಾರಿಗೆ ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ
ಕಾಮಗೆರೆ ಗ್ರಾಮಸ್ಥರು ಸಾರ್ವಜನಿಕರು ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೊಳ್ಳೇಗಾಲ ಹನೂರು ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಯಾವುದೇ ಕಡಿವಾಣ ಇಲ್ಲದೆ ಅತಿ ವೇಗವಾಗಿ ಸಂಚರಿಸುತ್ತವೆ ಇದರಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗೆರೆ ಮುಖ್ಯ ರಸ್ತೆಯಲ್ಲಿ ಆಸ್ಪತ್ರೆ ಮತ್ತು ಶಾಲೆಗಳು ಇರುವುದು ದಿನನಿತ್ಯ ಶಾಲಾ ಮಕ್ಕಳು ಸಾರ್ವಜನಿಕರು ಪ್ರಾಣ ಭಯದಿಂದಲೇ ರಸ್ತೆ ದಾಟಬೇಕಾಗಿದೆ. ವಾಹನ ಸಂಚಾರ ಹೆಚ್ಚಾಗಿರುವುದರಿಂದ ಅಪಘಾತಗಳು ಸಂಭವಿಸುತ್ತವೆ ಹಾಗಾಗಿ ಇಲ್ಲಿ ವಾಹನಗಳ ವೇಗ ನಿಯಂತ್ರಣ ಮಾಡಲು ಹಂಪ್ಸ್ ಅಥವಾ ಬ್ಯಾರಿಕೇಡ್ ಅಳವಡಿಸಿ ಅಪಘಾತ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಎರಡು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೆÇಲೀಸ್ ಇಲಾಖೆ ಅಧಿಕಾರಿಗಳು ಪ್ರತಿಭಟನಾ ನಿರತರ ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ತಿಳಿಸಿ ಬ್ಯಾರಿಕೇಡ್ ಅಳವಡಿಸಲಾಗುವುದು ಹಾಗೂ ಮೃತ ನಮೀತಾ ಅವರ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.