ಗ್ರಾ.ಪಂ ಅಧ್ಯಕ್ಷೆಯಿಂದ ಅಧಿಕಾರ-ಹಣ ದುರುಪಯೋಗ: ಸದಸ್ಯರ ಧರಣಿ
ಸಂಜೆವಾಣಿ ವಾರ್ತೆ
ಹನೂರು ಆ 8 : – ಚಾಮರಾಜನಗರ ಗ್ರಾಮ ಪಂಚಾಯತಿ ಅಧ್ಯಕ್ಷೆಯ ವಿರುದ್ದ ಸಿಡಿದೆದ್ದಿರುವ ಸದಸ್ಯರು ಅಧಿಕಾರ ಹಾಗೂ ಹಣ ದುರ್ಬಳಕೆ ವಿರೋಧಿಸಿ ಗ್ರಾಮ ಪಂಚಾಯತಿ ಮುಂದೆ ಧರಣಿ ನಡೆಸಿದ ಘಟನೆ ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯತಿಯಲ್ಲಿ ಬುಧವಾರ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯ್ತಿ ಮುಂದೆ ಸದಸ್ಯರು ಹಾಗೂ ಸಾರ್ವಜನಿಕರು ಧರಣಿ ನಡೆಸಿ ಅಧ್ಯಕ್ಷರ ವಿರುದ್ದ ಘೋಷಣೆ ಕೂಗಿ ಅಧಿಕಾರ ದುರ್ಬಳಕೆ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿರುವುದನ್ನು ಖಂಡಿಸಿ ಪ್ರತಿಭಟಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಹೆಚ್ ಎಸ್ ಗಗನಾ ರವರು ಅಧ್ಯಕ್ಷೆಯಾಗುವ ಮುನ್ನ ಪಂಚಾಯತಿ ಯಲ್ಲಿ ನಡೆಸಿರುವ 11 ಸಭೆಗೆ ಹಾಜರಾಗಿಲ್ಲ ಆದರೂ ಸಹ ಅಧ್ಯಕ್ಷರಾದ ಬಳಿಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೆ ಬೆದರಿಸಿ ಗೌರವ ಧನವನ್ನು ಒಟ್ಟಿಗೆ ಡ್ರಾ ಮಾಡಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಅದ್ಯಕ್ಷೆಯಾಗಿ ಆಯ್ಕೆ ಬಳಕ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಪಂಚಾಯತ್ ಅಭಿವೃದ್ದಿ ಕುಂಠಿತವಾಗಲು ಕಾರಣರಾಗಿದ್ದಾರೆ ಎಂದು ದೂರಿದರು.
ಪಂಚಾಯತಿ ಸದಸ್ಯರ ಮನಸ್ತಾಪದ ನಡುವೆ ಸರಿಯಾಗಿ ಸಭೆಗಳು ನಡೆಯುತ್ತಿಲ್ಲ, ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸ ಕಾರ್ಯ ನಡೆಯುತ್ತಿಲ್ಲ, ಈ-ಸೊತ್ತು ಗಳು ನೀಡುತ್ತಿಲ್ಲ ಎಂದು ಸದಸ್ಯರುಗಳು ಗಂಭೀರವಾಗಿ ಆರೋಪಿಸಿದರು.ಅಧ್ಯಕ್ಷರ ಅಧಿಕಾರ ದುರುಪಯೋಗ ಹಾಗೂ ಹಣ ದುರ್ಬಳಕೆ ಮತ್ತು 11 ಸಭೆಗೆ ಗೈರಾಗಿರುವ ಬಗ್ಗೆ ಜಿಲ್ಲಾ ಪಂಚಾಯತಿ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರು ಅಧಿಕಾರಿಗಳು ಕ್ರಮ ವಹಿಸದ ಬಗ್ಗೆ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.
ಧರಣಿಯಲ್ಲಿ ಮಾಜಿ ಅಧ್ಯಕ್ಷ. ಹಾಗೂ ಹಾಲಿ ಸದಸ್ಯ ಮಹದೇವಸ್ವಾಮಿ ( ಕಲರ್) ಸದಸ್ಯರಾದ ಗಿರೀಶ್, ಮಹದೇವಸ್ವಾಮಿ ಹಾಗೂ ಮಾಜಿ ಅಧ್ಯಕ್ಷ ಲಿಂಗಾರಾಜು, ಮಾಜಿ ಸದಸ್ಯ ಮುತ್ತುರಾಜ್ ಹಾಗೂ ಮಹಿಳಾ ಸದಸ್ಯರುಗಳು ಭಾಗವಹಿಸಿದ್ದರು. ಸ್ಥಳಕ್ಕೆ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಪ್ರಕಾಶ್ ಭೇಟಿ ನೀಡಿ ಮಾಹಿತಿ ಕಲೆಹಾಕಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.