ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ಕಾನೂನು ಅರಿವು ಅತ್ಯಗತ್ಯ: ಉಮ್ಮತ್ತೂರು ಇಂದು ಶೇಖರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.08- ಶೈಕ್ಷಣಿಕ ಹಂತದಲ್ಲಿ ಇಂದಿನ ಮಕ್ಕಳಿಗೆ ಕಾನೂನು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.
ನಗರದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಮತ್ತು ಆಸರೆ ಚಾರಿಟಬಲ್ ಟ್ರಸ್ಟ್, ಚಾಮರಾಜನಗರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ಬೆಳವಣಿಗೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನಿನ ಜ್ಞಾನ ಇದ್ದರೆ ಯೋಗ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಲ್ಲರೂ ಪರಿಪೂರ್ಣವಾದ ಕಾನೂನಿನ ಅರಿವು ಹೊಂದಲು ಸಾಧ್ಯವಿಲ್ಲ. ಆದರೂ ದಿನನಿತ್ಯದ ಅವಶ್ಯಕತೆಗಾಗಿ ಕೆಲವು ಕಾನೂನು ವಿಷಯಗಳನ್ನು ತಿಳಿಯಬೇಕಾಗಿರುವುದು ಅವಶ್ಯಕ. ಕಾನೂನಿನ ವಿರುದ್ಧ ಮಾಡುವ ಚಟುವಟಿಕೆಗಳಿಗೆ ಕ್ಷಮೆ ಇರುವುದಿಲ್ಲ. ಕಾನೂನು ನಿಮ್ಮ ರಕ್ಷಣೆಗಾಗಿ ಇರುವುದರಿಂದ ಕಾನೂನಿಗೆ ಯಾರೂ ವಿರುದ್ಧವಾಗಿ ನಡೆದು ಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ದಾನೇಶ್ವರಿ ಜೀ ಸಾನಿಧ್ಯ ವಹಿಸಿ ಮಾತನಾಡಿ ಪ್ರಸ್ತುತ ಯುವ ಜನಾಂಗ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಶಿಕ್ಷಣ ಉದ್ಯೋಗ ನೀಡುತ್ತದೆ.ನಮಗಾಗಿ, ಸಮಾಜಕ್ಕಾಗಿ ದುಡಿಯುವ ಮೂಲಕ ಸಮಾಜಸೇವೆ ಮಾಡುವ ಛಲವಿದ್ದರೆ ಮಾತ್ರ ಸಮಾಜದಲ್ಲಿ ಸುಸಂಸ್ಕøತ ವಾತಾವರಣ ಕಾಣಬಹುದು. ದೇಶದ ನಾಗರೀಕರಾದ ಪ್ರತಿಯೊಬ್ಬರೂ ದೇಶದ ಅಭಿವೃದ್ಧಿ ಬಗ್ಗೆ ನಮ್ಮದೇ ಆದಂತಹ ಜವಾಬ್ದಾರಿ ಇರುತ್ತದೆ. ಅದನ್ನು ನಿರ್ವಹಿಸಿದರೆ ಉತ್ತಮ ಸತ್ಪ್ರಜೆ ಎಂಬ ಹೆಗ್ಗಳಿಕೆಗೆ ವಿದ್ಯಾರ್ಥಿಗಳು ಪಾತ್ರರಾಗುತ್ತಾರೆ ಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯ ಟಿ. ಜೆ. ಸುರೇಶ್ ಮಾತನಾಡಿ ಇತ್ತೀಚೀನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳಾಗುತ್ತಿವೆ. ಓದುವ ವಯಸ್ಸಿನಲ್ಲಿ ಜಾಗೃತರಾಗಿರಬೇಕು. ಮೊಬೈಲ್, ಸಿನಿಮಾ, ಧಾರಾವಾಹಿಗಳಿಂದ ದೂರವಿದ್ದು, ಒಳ್ಳೆಯ ವಿಚಾರಗಳಿರುವುದನ್ನು ವೀಕ್ಷಣೆ ಮಾಡಬೇಕು.ಆಗಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.
ವಿದ್ಯಾರ್ಥಿ ನಿಲಯ ಪಾಲಕ ಬಸವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಪೆÇಲೀಸ್ ಇಲಾಖೆಯ ಎಸ್.ಜೆ.ಪಿ.ಯು ಯೂನಿಟ್‍ನ ಪ್ರಸನ್ನಮೂರ್ತಿ, ಯುವ ಸ್ಪಂದನ ಕೇಂದ್ರದ ಯುವ ಪ್ರವರ್ತಕ ಗುರುರಾಜ್, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಆರಾಧ್ಯ ಇದ್ದರು.