ಪ್ರಯೋಗಗಳ ಮೂಲಕ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಿ
ಕೋಲಾರ,ಆ,೮- ವಿಜ್ಞಾನ ವಿಷಯದಲ್ಲಿ ಆಸಕ್ತಿ ಕುತೂಹಲ ಕೆರಳಿಸುವ ಪ್ರಯೋಗಗಳು ಇದ್ದು, ಮಕ್ಕಳಲ್ಲಿ ಕಲಿಕೆಯ ಆಸೆ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಅತಿ ಮಹತ್ವದ್ದಾಗಿದೆ. ಸಾಮಾನ್ಯ ಜನರಲ್ಲಿ ವೈಜ್ಞಾನಿಕ ಮನೋಭಾವನೆ ಅಭಿವೃದ್ಧಿ ಆದಂತೆ ಸಮಾಜದ ಎಲ್ಲಾ ನಾಗರಿಕರಲ್ಲಿ ಸ್ವಾತಂತ್ರ್ಯ ಸಮಾನತೆ ಹಾಗೂ ಭಾತೃತ್ವ ಭಾವನೆ ನಿರ್ಮಾಣವಾಗುತ್ತದೆ ಎಂದು ರವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಇ.ಗೋಪಾಲಪ್ಪ ಅಭಿಪ್ರಾಯಪಟ್ಟರು.
ನಗರದ ಗೌರಿಪೇಟೆಯಲ್ಲಿನ ರವಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ೨ ದಿನಗಳ ವಿಜ್ಞಾನ ಮೇಳ-೨೦೨೪ಕ್ಕೆ ಚಾಲನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿಜ್ಞಾನ ಇಂದು ಜೀವನದಲ್ಲಿ ಹಾಸುಹೊಕ್ಕಾಗಿದೆ, ವಿಜ್ಞಾನವಿಲ್ಲದೇ ಜೀವನವೇ ಇಲ್ಲವೆನ್ನುವಂತಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ನಗರ ಸಿಆರ್‌ಪಿ ಸುರೇಶ್, ಆಧುನಿಕತೆ ಬೆಳೆದಂತೆಲ್ಲ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ನಡೆದು ಮಾನವನ ಜೀವನ ಮಟ್ಟವನ್ನು ಎತ್ತರಕ್ಕೆ ಏರಿಸಿದೆ. ಈ ಮೂಲಕ ವಿಜ್ಞಾನ ಮಾನವನ ಬದುಕಿನ ದಿಕ್ಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ವಸ್ತುಪ್ರದರ್ಶನದಿಂದ ಹೊಸ ಆವಿಷ್ಕಾರ ಮಾಡಬಹುದು. ಜತೆಗೆ ವಿನೂತನ ವಿದ್ಯೆ ಕಲಿಸುವ ವಿಜ್ಞಾನವು ವಿದ್ಯಾರ್ಥಿಗಳಿಗೆ ಅಗತ್ಯ ಎಂದರು.
ವಿಜ್ಞಾನ ಇಂದು ಹಾಸುಹೊಕ್ಕಾಗಿದೆ. ವಿಜ್ಞಾನವಿಲ್ಲದೇ ಸಮಾಜವಿಲ್ಲ. ವೈಜ್ಞಾನಿಕ ತಳಹದಿಯ ಮೇಲೆ ವಿಜ್ಞಾನ ಬೆಳೆಸಲು ಸಾರ್ವಜನಿಕರ ಸಹಕಾರ ಅಗತ್ಯ. ಮೂಡನಂಬಿಕೆಗಳನ್ನು ಬದಿಗಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಲು ಸರ್ವರ ಚಿಂತನೆ ಅಗತ್ಯ ಎಂದು ತಿಳಿಸಿದರು.
ಗ್ರೇಸ್ ಜಯಂತಿ ಮೆಮೋರಿಯಲ್ ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಬಲ್ಫ್ ಕಂಡುಹಿಡಿದ ವಿಜ್ಞಾನಿ ಐನ್‌ಸ್ಟೀನ್ ಮೊದಲು ಶಾಲೆಗೆ ಹೋದಾಗ ಆತನನ್ನು ದಡ್ಡನೆಂದು ಮನೆಗೆ ಕಳುಹಿಸಿದರು. ಆದರೆ, ಜಗತ್ತಿಗೆ ವಿದ್ಯುತ್ ಬೆಳಕನ್ನು ಪರಿಚಯಿಸಿಕೊಟ್ಟ ಮಹಾನ್ ವ್ಯಕ್ತಿಯಾದರೆಂದು ಉದಾಹರಣೆ ನೀಡಿ ಹಲವು ವಿಷಯಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ರವಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಜಿ.ನರೇಶ್‌ಬಾಬು, ಎ.ಸುಷ್ಮ, ಮುಖ್ಯ ಶಿಕ್ಷಕಿ ಭವಾನಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.