ಟಿಹೆಚ್‌ಇಒ ಎನ್.ಎಸ್.ಮಂಜುನಾಥ್ ಸಲಹೆಸ್ವಚ್ಛತೆ ಕಾಪಾಡಿ, ರೋಗ ಓಡಿಸಿ
ಚಿತ್ರದುರ್ಗ.ಆ.೮; ಸ್ವಚ್ಛತೆ ಕಾಪಾಡುವ ಮೂಲಕ ರೋಗಗಳನ್ನು ಓಡಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ನೀಡಿದರು.ಚಿತ್ರದುರ್ಗ ನಗರದ ಜೆ.ಜೆ.ಹಟ್ಟಿ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ನಗರಸಭೆ ಸಹಯೋಗದೊಂದಿಗೆ ಡಯೇರಿಯಾ ತಡೆಗಟ್ಟುವ ಅಭಿಯಾನ, ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗವೇ ಬಾರದಹಾಗೆ ಜೀವನ ರೂಪಿಸಿಕೊಳ್ಳವುದು ಉತ್ತಮ. ಡಯೇರಿಯಾ ಕಲುಷಿತ ನೀರು, ಆಹಾರ ಸೇವನೆಯಿಂದ ಬರುವ ಸಾಂಕ್ರಾಮಿಕ ರೋಗ. ಶುದ್ಧ ನೀರು ಅಹಾರ, ವೈಯಕ್ತಿಕ ಸ್ವಚ್ಛತೆ ಸರಿಯಾದ ಕ್ರಮದಲ್ಲಿ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು, ಆರೋಗ್ಯಕರ ಅಭ್ಯಾಸಗಳು ರೂಡಿಸಿಕೊಳ್ಳಿ ಎಂದು ಹೇಳಿದರು.ಮಗುವಿಗೆ ಬೇಧಿಯಾಗಿದೆ ಎಂದು ಎದೆಹಾಲುಣಿಸುವುದನ್ನು ನಿಲ್ಲಿಸಬೇಡಿ. ಎದೆಹಾಲು ಯಥೇಶ್ಛವಾಗಿ ನೀಡಿ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಆರು ತಿಂಗಳ ಕಾಲ ಎದೆಹಾಲನ್ನು ಬಿಟ್ಟು ಮಗುವಿಗೆ ಬೇರೆ ಏನನ್ನು ನೀಡಬೇಡಿ ಕಡೇ ಪಕ್ಷ ಎರಡು ವರ್ಷಗಳ ತನಕ ಮಗುವಿಗೆ ಎದೆಹಾಲು ನೀಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದರು.