ಜಲಾನಯನ ಪ್ರದೇಶದಲ್ಲಿ ಕಡಿಮೆಯಾದ ಮಳೆ; ನದಿಗೆ ನೀರು‌ಬಿಡುವುದನ್ನು ನಿಲ್ಲಿಸಲು ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ, ಆ.7; ಭದ್ರಾ ಅಣೆಕಟ್ಟೆ ಭರ್ತಿಯಾಗಲು ಇನ್ನೂ 6 ಅಡಿ ಅಗತ್ಯವಿದ್ದು, ಘಟ್ಟ ಪ್ರದೇಶ, ಡ್ಯಾಂನ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡುವುದನ್ನು ತಕ್ಷಣ ನಿಲ್ಲಿಸುವಂತೆ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಅಧ್ಯಕ್ಷ, ರೈತ ಮುಖಂಡ ಶಾಬನೂರು ಎಚ್.ಆರ್‌.ಲಿಂಗರಾಜ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಭಾರತೀಯ ರೈತ ಒಕ್ಕೂಟದ ಮುಖಂಡರ ತಂಡವು ಸೋಮವಾರ ಶಿವಮೊಗ್ಗ ಜಿಲ್ಲೆಯ ಭದ್ರಾ ಡ್ಯಾಂಗೆ ಭೇಟಿ ನೀಡಿದ್ದ ವೇಳೆ ಅಣೆಕಟ್ಟೆ ಭರ್ತಿಯಾಗಲು ಇನ್ನೂ 6 ಅಡಿ ನೀರಿನ ಅಗತ್ಯವಿರುವ ಹಿನ್ನೆಲೆಯಲ್ಲಿ ಭದ್ರಾ ಕಾಡಾ ಅಧ್ಯಕ್ಷರು, ಕರ್ನಾಟಕ ನೀರಾವರಿ ನಿಗಮ, ನೀರಾವರಿ ಇಲಾಖೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ತಕ್ಷಣವೇ ನದಿಗೆ ನೀರು ಹರಿಸುವುದನ್ನು ತಡೆಯಲು ಮನವಿ ಮಾಡಿದರು. ಸದ್ಯಕ್ಕೆ ತುಂಗಾ ಮತ್ತು ಭದ್ರಾ ಅಣೆಕಟ್ಟೆಗಳ ಜಲಾನಯನ ಪ್ರದೇಶ, ಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಭದ್ರಾ ಅಣೆಕಟ್ಟೆಯಲ್ಲಿ ಇನ್ನೂ 7 ಟಿಎಂಸಿ ನೀರು ಸಂಗ್ರಹ ಆಗಬೇಕಾಗಿದೆ. ಮಳೆ ಇಲ್ಲದೇ ಡ್ಯಾಂಗೆ ಒಳ ಹರಿವು ಕಡಿಮೆ ಇದ್ದು, ಅಷ್ಟೇ ನೀರನ್ನು ನದಿಗೆ ಬಿಡುತ್ತಿರುವುದು ಸರಿಯಲ್ಲ. ಸದ್ಯಕ್ಕೆ ಮಳೆ ಸಂಪೂರ್ಣ ನಿಂತಿದ್ದು, ಅಣೆಕಟ್ಟೆ ತುಂಬಲು ಇನ್ನೂ 6 ಅಡಿ ನೀರು ಬರಬೇಕಾಗಿದೆ. ಹೀಗೆಯೇ ಒಳ ಹರಿವಿನಷ್ಟೇ ನೀರು ನದಿಗೆ ಬಿಟ್ಟರೆ ಅಚ್ಚುಕಟ್ಟು ರೈತರು ಸುಮಾರು ಒಂದೂವರೆ ತಿಂಗಳಷ್ಟು ನೀರನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಶಿವಮೊಗ್ಗ ಜಿಲ್ಲಾಧಿಕಾರಿಗಳು ನೆರೆಯಾಗುತ್ತದೆಂಬು ದಾಗಿ ಡ್ಯಾಂನಿಂದ ನದಿಗೆ ನೀರು ಹರಿಸಲು ಸೂಚಿಸಿದ್ದಾರೆಂಬುದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸ್ವತಃ ಡ್ಯಾಂಗೆ ಭೇಟಿ ನೀಡಿದ್ದ ವೇಳೆ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರು, ಮುಖ್ಯ ಅಭಿಯಂತರ ರಿಗೂ ಕರೆ ಮಾಡಿ, ನದಿಗೆ ನೀರು ಬಿಡದಂತೆ ಮನವಿ ಮಾಡಿದ್ದೇವೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನವರು ತಕ್ಷಣವೇ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಅಲ್ಲಿನ ಜಿಲ್ಲಾಧಿಕಾರಿಗೆ ಹೇಳಿ, ನದಿಗೆ ನೀರು ಹರಿಸದಂತೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. ನೀರಾವರಿ ಅಧಿಕಾರಿಗಳು, ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಭದ್ರಾ ಅಣೆಕಟ್ಟೆ ನೀರಿನ ನಿರ್ವಹಣೆಯ ಬಗ್ಗೆ ಕನಿಷ್ಟ ಅನುಭ‍ವ, ಜ್ಞಾನ ಯಾವುದೂ ಸಹ ಇಲ್ಲ. ಈಗಾಗಲೇ ಘಟ್ಟ ಪ್ರದೇಶ, ಮಲೆನಾಡು ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ವಿನಾಕಾರಣ ನದಿಗೆ ಒಳ ಹರಿವಿನಷ್ಟೇ ನೀರನ್ನು ಹರಿಸಲಾಗುತ್ತಿದೆ. ನೀರು ನಿರ್ವಹಣೆ ಜ್ಞಾನವಿಲ್ಲದ ಅಧಿಕಾರಿಗಳು ಭದ್ರಾ ಅಣೆಕಟ್ಟೆ ವ್ಯಾಪ್ತಿಯ ರೈತರು, ಅಚ್ಚುಕಟ್ಟು ರೈತರ ಬದುಕನ್ನು ಅಧ್ವಾನಕ್ಕೆ ತರುವ ಅಪಾಯವಿದೆ. ಈಗಾಗಲೇ ಮಳೆ ಕಡಿಮೆಯಾಗಿದ್ದರೂ, ನದಿಗೆ ವ್ಯರ್ಥವಾಗಿ ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು. ಒಂದು ವೇಳೆ ಮಳೆ ಇಲ್ಲಿಗೆ ನಿಂತರೆ ಭದ್ರಾ ಡ್ಯಾಂ ನಲ್ಲಿರಬೇಕಾಗಿದ್ದ ಸುಮಾರು 6 ಟಿಎಂಸಿ ನೀರು ಖೋತಾ ಆಗಲಿದೆ. ಅತಿವೃಷ್ಟಿ ವೇಳೆ ತುಂಬಿರುತ್ತಿದ್ದ ಭದ್ರಾ ಡ್ಯಾಂ ಆರು ಟಿಎಂಸಿ ನೀರುತುಂಬಿದ್ದು ಸಹ ವ್ಯರ್ತವಾಗಲಿದೆ. ಹಿಂದೆ ಮಳೆ ತೀವ್ರವಾಗಿ ಸುರಿಯುತ್ತಿದ್ದ ವೇಳೆ 145 ಅಡಿ ತಲುಪಿದ್ದಾಗ, ರನ್ ದಿ ರಿವರ್ ಇದ್ದಾಗಲೇ ನದಿಗೆ ನೀರು ಬಿಡುವಂತೆ ಒತ್ತಡ ಹೇರಿದ್ದೆವು. ಆದರೆ, ಅದ್ಯಾವುದಕ್ಕೂ ಕಿವಿಗೊಡದ ಅಧಿಕಾರಿಗಳು ಮಳೆ ಬರುವಾಗ ಅನುಭವದ ಮಾತುಗಳನ್ನು ಹೇಳಿದರೂ ಸ್ಪಂದಿಸಲಿಲ್ಲ. ರನ್ ದಿ ರಿವರ್‌ನಲ್ಲಿ ನೀರು ಬಳಸಿದ್ದರೆ ಮಳೆಗಾಲದ ಬೆಳೆಗೂ ಈಗ ಬಿಡುತ್ತಿರುವ ನೀರನ್ನು ಬಳಸಬಹುದಿತ್ತು ಎಂದು ಅವರು ತಿಳಿಸಿದರು. ತುಂಗಭದ್ರಾ ನದಿಗೆ ವ್ಯರ್ಥವಾಗಿ ನೀರು ಹರಿಸದೇ, ಡ್ಯಾಂ ಗೇಟ್ ಬಂದ್ ಮಾಡಬೇಕು. ಮೊದಲು ಡ್ಯಾಂನಲ್ಲಿ 186 ಅಡಿ ನೀರು ತುಂಬಿಸಿ. ಸದ್ಯಕ್ಕೆ ಸುಮಾರು 16 ಸಾವಿರ ಕ್ಯೂಸೆಕ್ಸ್‌ ಒಳಹರಿವಿದೆ. ನಾಲೆಗಳಿಗೆ 2450 ಕ್ಯೂಸೆಕ್ಸ್ ಹರಿಸಲಾಗುತ್ತಿದೆ. ನದಿಗೆ ಹೊರ ಹರಿವು 15,555 ಕ್ಯೂಸೆಕ್ಸ್ ಬಿಡಲಾಗುತ್ತಿದೆ. ಡ್ಯಾಂ ಭರ್ತಿಯಾಗಲು ಇನ್ನೂ 7 ಟಿಎಂಸಿ ನೀರು ಬರಬೇಕು. ಈಗಾಗಲೇ ಘಟ್ಟ ಪ್ರದೇಶ, ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ರೈತರಿಗೆ ತೀವ್ರ ಅನ್ಯಾಯವಾಗುತ್ತದೆ. 1 ಅಥವಾ 2 ತಿಂಗಳಿಗಾಗುವಷ್ಟು 7 ಟಿಎಂಸಿನೀರು ವ್ಯರ್ಥವಾಗಿ ನದಿ ಮೂಲಕ ಹರಿದು ಹೋಗುತ್ತಿದೆ ಎಂದು ಶಾಬನೂರು ಎಚ್.ಆರ್.ಲಿಂಗರಾಜ ಬೇಸರ ಹೊರ ಹಾಕಿದರು. ರೈತ ಒಕ್ಕೂಟದಭಾರತೀಯ ರೈತ ಒಕ್ಕೂಟದ ಮುಖಂಡರಾದ ಮಂಜುನಾಥ, ಎಂ.ಎಚ್.ಬಸವರಾಜ, ಗ್ಯಾರಹಳ್ಳಿ ಗಣೇಶ, ಬೂದಿಹಾಳ ಬಸವರಾಜ, ರವಿ ಕುಕ್ಕವಾಡ ಇತರರು ಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ್ದರು.
..