ಕೃಷಿ ಕಂಪನಿಯೊಂದರ ಮೋಸದಿಂದ ಬೆಳೆ ಅಳಿಸಿದ ರೈತ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೭; ಹೊಲದ ತುಂಬೆಲ್ಲಾ ಹುಲುಸಾಗಿ ಬೆಳೆದಿರುವ ಕಪ್ಪು ಅರಿಶಿನ, ಅರಿಶಿನ ಬೆಳೆಯನ್ನು ಟ್ಯಾಕ್ಟರ್ ಮೂಲಕ ಅಳಿಸುತ್ತಿರುವ ರೈತ ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ. ಹೌದು ಗ್ರಾಮದ ರುದ್ರೇಶ್ ಎಂಬಾಂತ ಕಳೆದ ಮೂರು ವರ್ಷಗಳ ಹಿಂದೆ ಒಂದು ಎಕೆರೆ ಜಮೀನಿನಲ್ಲಿ ಕಪ್ಪು ಅರಿಶಿನ ಬೆಳೆದಿದ್ದರು. ಕಂಪನಿಯೊಂದರ ಮಾತು ಕೇಳಿ ರುದ್ರೇಶ್ ಸೇರಿದಂತೆ ಸುಮಾರು ಏಳೆಂಟು ಜನ ರೈತರು ಕಪ್ಪು ಅರಿಶಿನ ಬೆಳೆದಿದ್ದರು. ಬೆಳೆ ಚೆನ್ನಾಗಿ ಬಂದ ನಂತರ ಅದನ್ನು ಖರೀದಿ ಮಾಡಲು ಯಾರೂ ಕೂಡ ಬರಲಿಲ್ಲಾ. ಕನಿಷ್ಟ ಇದನ್ನು ಮಾರುಕಟ್ಟೆಯಲ್ಲಿ ಮಾರೋಣ ಎಂದರೆ ಸೂಕ್ತ ಮಾರುಕಟ್ಟೆ ಇಲ್ಲಾ, ಜೊತೆಗೆ ಬೆಲೆ ಕೂಡ ಇಲ್ಲಾ. ಒಂದು ಕೆಜಿಗೆ 40 ರಿಂದ 50 ರೂಪಾಯಿಗೆ ಕೇಳುತ್ತಿದ್ದಾರೆ. ಹೊಗಲಿ ಎಂದು ರುದ್ರೇಶ್ ಅದೇ ಬೆಲೆಗೆ ಕಳೆದ ಬಾರಿ ಅರಿಶಿನ ಮಾರಿದ್ದು ಅದನ್ನು ಕೊಂಡು ಹೋದವನು ಹಣನೂ ನೀಡಿಲ್ಲಾ ಆತನೂ ನಾಪತ್ತೆಯಾಗಿದ್ದು, ಇದರಿಂದ ಮನನೊಂದು ರುದ್ರೇಶ್ ಕಷ್ಟ ಪಟ್ಟು ಬೆಳೆದ ಕಪ್ಪು ಅರಿಶಿನವನ್ನು ಟ್ಯಾಕ್ಟರ್ ಮೂಲಕ ಅಳಿಸಿ ಭತ್ತ ನಾಟಿಗೆ ಮುಂದಾಗಿದ್ದಾರೆ. ಕಪ್ಪು ಅರಿಶಿನ ಆಯುರ್ವೇಧಿಕ್ ಔಷಧಿಗಳಿಗೆ ಹೆಚ್ಚಾಗಿ ಬಳಸುತ್ತಾರೆ. ಒಂದು ಕೆಜಿ ಕಪ್ಪು ಅರಿಶಿನ ಬೀಜಕ್ಕೆ 800 ರೂಪಾಯಿ ಇದ್ದು ಇದೂವರೆಗೂ ರುದ್ರೇಶ್ ಎಂಟು ಲಕ್ಷ ರೂಪಾಯಿ ಖರ್ಚು ಮಾಡಿದ್ದು ಒಂದೇ ಒಂದು ರೂಪಾಯಿ ಆದಾಯವನ್ನು ಕೂಡ ಗಳಿಸಿಲ್ಲಾ. ರುದ್ರೇಶ್ ಜೊತೆ ಸೇರಿ ಕಪ್ಪು ಅರಿಶಿನ ಹಾಕಿದವರು ಈಗಾಗಲೇ ಬೆಳೆ ಅಳಿಸಿ ಭತ್ತ ನಾಟಿ ಮಾಡಿದ್ದು, ಇದೀಗ ರುದ್ರೇಶ್ ಕಪ್ಪು ಅರಿಶಿನ ಅಳಿಸಿ ಭತ್ತ ನಾಟಿಗೆ ಮುಂದಾಗಿದ್ದಾರೆ ಅಲ್ಲದೇ ಯಾರೂ ಕೂಡ ಕಪ್ಪು ಅರಿಶಿನ ಬೆಳೆಯದಂತೆ ಮನವಿ ಮಾಡಿದ್ದಾರೆ. ಕಂಪನಿಗಳು ಬಂದು ರೈತರಿಗೆ ಮೋಸ ಮಾಡುತ್ತಿದ್ದು ರೈತರು ಎಚ್ಚರಿಕೆಯಿಂದ ಇರುವಂತೆ ರೈತರು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಕೃಷಿ ಕಂಪನಿಯೊಂದರ ಮಾತು ಕೇಳಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ರುದ್ರೇಶ್ ಇದೀಗ ಕಪ್ಪು ಅರಿಶಿನ ಅಳಿಸಿ ಭತ್ತ ನಾಟಿಗೆ ಮುಂದಾಗಿದ್ದಾರೆ.