ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಪ್ರಜ್ಞೆ ಬೆಳೆಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೮; ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜತೆಗೆ ಜೀವನ ಮೌಲ್ಯಗಳನ್ನು ಬೆಳೆಸಬೇಕು ಎಂದು ಡಿ.ಎಸ್.ಇ.ಆರ್.ಟಿ ಕಚೇರಿಯ ಹಿರಿಯ  ಸಹಾಯಕ ನಿರ್ದೇಶಕಿ ಸಿ.ಎಸ್. ಇಂದಿರಾ ಹೇಳಿದರು. ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ತರಬೇತಿ ಕೇಂದ್ರದಿಂದ ಸೃಜಿಸಲಾಗಿರುವ ಕಥೆಗಳನ್ನು ಶಾಲೆಗಳಲ್ಲಿ ಬಳಸುವ ಕುರಿತು ನಗರದ ಡಯಟ್ ವತಿಯಿಂದ ಸಿ.ಟಿ.ಇನಲ್ಲಿ ಆಯೋಜಿಸಿದ್ದ ಎಂ.ಆರ್.ಪಿ ತರಬೇತಿ ಕಾರ್ಯಾಗಾರ ವೀಕ್ಷಿಸಿ ಮಾತನಾಡಿದ ಅವರು ಶಿಕ್ಷಕರು ತರಗತಿ ನಿರ್ವಹಣೆಯಲ್ಲಿ ಕಥೆಗಳನ್ನು ಸಮನ್ವಯಗೊಳಿಸಿಕೊಂಡು ಅನೇಕ ವಿಷಯಗಳನ್ನು ಬೋಧಿಸಲು ಅವಕಾಶವಿದೆ. ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಿ ಆಲಿಸುವ ಕೌಶಲ ಬೆಳೆಸಲು ಕಥೆಗಳು ಪೂರಕವಾಗಿವೆ ಎಂದು ತಿಳಿಸಿದರು. ಇ-ಕಂಟೆಂಟ್ ಕಥೆಗಳನ್ನು ಶಾಲೆಗಳಲ್ಲಿ ಆಡಿಯೊ ಗ್ರಂಥಾಲಯವಾಗಿ ಬಳಸಿಕೊಳ್ಳಲು ಕ್ಲಸ್ಟರ್ ಸಭೆಗಳಲ್ಲಿ ಎಂ.ಆರ್.ಪಿಗಳು ಶಿಕ್ಷಕರಿಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು. ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ತರಬೇತಿ ಕೇಂದ್ರದ ಮುಖ್ಯಸ್ಥರಾದ ಗುರುಪ್ರಸಾದ್, ಕಾರ್ಯಕ್ರಮಾಧಿಕಾರಿ ಡಿ.ನರಸಿಂಹಪ್ಪ, ನೋಡಲ್ ಅಧಿಕಾರಿ ಎಸ್. ಬಸವರಾಜು, ಉಪನ್ಯಾಸಕರಾದ ಹೇಮಲತಾ, ರೇವಣ್ಣ, ವೃತ್ತಿ ಶಿಕ್ಷಣ ವಿಷಯ ಬೋಧಕ ಹಾಲೇಶ್, ಸಂಪನ್ಮೂಲ ವ್ಯಕ್ತಿಗಳಾದ ಐ.ಟಿ ಫಾರ್ ಚೇಂಜ್ ಸಂಸ್ಥೆಯ ಅನುಷಾ, ರಾಕೇಶ್, ಗಿರಿಜಾ, ಪುನೀತ್, ಸಿ.ಆರ್.ಪಿ ಸೌಭಾಗ್ಯ, ಜಾವಿದ್ ಭಾಷಾ ಮತ್ತು ಶಿಬಿರಾರ್ಥಿಗಳು ಇದ್ದರು.