ಕುಂಬಾರ್ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಿಸಿ ಅನುದಾನ ಬಿಡುಗಡೆಗೆ ಆಗ್ರಹ
ಕಲಬುರಗಿ:ಆ.7: ಕರ್ನಾಟಕ ರಾಜ್ಯ ಕುಂಬಾರ್ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡಿ ಅನುದಾನ ಒದಗಿಸಬೇಕು ಎಂದು ಜಿಲ್ಲಾ ಹಿಂದುಳಿದ ಕುಂಬಾರರ ಸಂಘದ ಅಧ್ಯಕ್ಷ ಶಿವಶರಣಪ್ಪ ಎಲ್. ಕುಂಬಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2023ರ ಮಾರ್ಚ್‍ನಲ್ಲಿ ಕುಂಬಾರ್ ಸಮುದಾಯ ಅಭಿವೃದ್ಧಿ ನಿಗಮ ರಚನೆಯಾಗಿದ್ದು, ಇಲ್ಲಿಯವರೆಗೂ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ ಹಾಗೂ ಅನುದಾನ ಸಹ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕುಂಬಾರರು ಹಿಂದುಳಿದ ಸಮುದಾಯಕ್ಕೆ ಸೇರಿದವರು ಎಂಬ ಹಣೆಪಟ್ಟೆ ಮಾತ್ರ ಇದೆ. ಆದಾಗ್ಯೂ, ಸರ್ಕಾರದವರು ಹಿಂದುಳಿದ ವರ್ಗದವರಿಗೆ ನೀಡುವ ಸೌಲಭ್ಯಗಳಿಂದ ನಮ್ಮ ಸಮುದಾಯ ವಂಚಿತವಾಗುತ್ತಿದೆ. ಕಾರಣ ನಾವು ಕರ್ನಾಟಕದಲ್ಲಿ ಹಿಂದುಳಿದ ವರ್ಗದವರಲ್ಲಿ ಅತೀ ಹಿಂದುಳಿದ ಸಮುದಾಯದವರಾಗಿದ್ದೇವೆ. ಹೀಗಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿದಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಮ್ಮನ್ನು ಒಳಗೊಂಡಂತೆ ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಅನೇಕ ಬಾರಿ ಕುಂಬಾರರು ಪ್ರತಿಭಟನೆಯನ್ನು ಮಾಡಿದ್ದೇವೆ. ನಿವೇದನೆ ಪತ್ರವನ್ನು ಮುಖ್ಯಮಂತ್ರಿಗಳಿಗೂ ಸೇರಿ ಸಂಬಂಧಿಸಿದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಆದಾಗ್ಯೂ, ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಹಾಗೂ ಪ್ರತಿಫಲ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ನಾಯಕರೆಂದೇ ಖ್ಯಾತಿ ಹೊಂದಿರುವ ಸಿದ್ಧರಾಮಯ್ಯ ಅವರು ಕೂಡಲೇ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ, ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರಭು ಕುಂಬಾರ್ ಬೆಣ್ಣೂರ್, ಶರಣು ಕುಂಬಾರ್ ಅಫಜಲಪುರ, ಶರಣಪ್ಪ ಕುಂಬಾರ್ ಗಡಿಕೇಶ್ವಾರ್ ಮುಂತಾದವರು ಉಪಸ್ಥಿತರಿದ್ದರು.