ದಲಿತರಲ್ಲಿ ಹೋರಾಟದ ಮೂಲಕ ಜಾಗೃತಿ ಮೂಡಿಸಿದ ಸಾಗರ
ಕಲಬುರಗಿ,ಆ.7-ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ, ಡಾ.ಚನ್ನಣ್ಣ ವಾಲೀಕಾರ ಅವರು ಅಂದಿನ ಸಮ್ಮೇಳನದ ಅಧ್ಯಕ್ಷರಿಗೆ ದಲಿತ ಗೋಷ್ಠಿ ಏರ್ಪಡಿಸಲು ಮನವಿ ಮಾಡಿದರು. ನಮ್ಮಲ್ಲಿ ದಲಿತ, ಬಲಿತ, ಕಲಿತ ಯಾವುದೇ ವಿಷಯ ಇಲ್ಲ. ಕನ್ನಡ ಬಿಟ್ಟು ದಲಿತ ಸಾಹಿತ್ಯಕ್ಕೆ ಅವಕಾಶ ಇಲ್ಲ ಎಂದಾಗ, ದಲಿತ, ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟುಹಾಕಿ, ದಲಿತ, ಬಂಡಾಯ ಸಮ್ಮೇಳನವನ್ನು ಏರ್ಪಡಿಸಿದ್ದರು. ಇಂದು ಅದೇ ಕನ್ನಡ ಸಾಹಿತ್ಯ ಪರಿಷತ್ತು, ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದಲಿತರಲ್ಲಿ ಜಾಗೃತಿ ಮೂಡಿಸಿದ ಡಾ.ಡಿ.ಜಿ.ಸಾಗರ ಅವರನ್ನು ಆಯ್ಕೆಮಾಡಿದ್ದು, ವಾಲೀಕಾರ ಅವರ ಕನಸ್ಸು ನನಸಾದಂತಾಗಿದೆ ಎಂದು ಸಿದ್ಧಮ್ಮ ಚನ್ನಣ್ಣ ವಾಲೀಕಾರವರು ಸಂತಸ ವ್ಯಕ್ತಪಡಿಸಿದವರು.
ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಡಿ.ಜಿ.ಸಾಗರ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಡಿ.ಜಿ. ಸಾಗರರವರು ಸರ್ಕಾರಿ ನೌಕರಿಗೆ ಸಲಾಮು ಹೊಡೆದು, ದಲಿತ ಸಂಘರ್ಷ ಸಮಿತಿಯ ಮೂಲಕ ಹಳ್ಳಿ, ಹಳ್ಳಿಗೆ ಜಾಥಾ ಮಾಡಿ ದಲಿತರಲ್ಲಿ ಶಿಕ್ಷಣ, ಸಂಘಟನೆ , ಹೋರಾಟದ ಅರಿವು ಮೂಡಿಸಿ ಬುದ್ಧ, ಬಸವ, ಡಾ.ಅಂಬೇಡಕರ ರವರ ವಿಚಾರಧಾರೆಯ ಪ್ರಸಾರ ಮಾಡುವುದಕ್ಕಾಗಿ ಇಡೀ ತಮ್ಮ ಜೀವಮಾನ ಶ್ರಮಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ಮುಂದಿನ ಯುವ ಜನಾಂಗಕ್ಕೆ ಮಾದರಿಯಾಗಲಿ ಎಂದರು.
ಡಾ.ಡಿ.ಜಿ.ಸಾಗರ ರವರು ಸಿದ್ಧಮ್ಮ ವಾಲೀಕಾರ ರವರಿಗೆ ಕೃತಜ್ಞತೆ ಸಲ್ಲಿಸಿದರು. ಸಾಗರ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ನ್ಯಾಯವಾದಿಗಳಾದ ಅಪ್ಪಾಸಾಹೇಬ ವಾಲೀಕಾರ, ಪ್ರಕಾಶ ವಾಲೀಕಾರ, ಅರವಿಂದ ವಾಲೀಕಾರ, ಡಾ.ಕೆ.ಎಸ್.ಬಂಧು.ಸಿದ್ದೇಶ್ವರ ರವರು ಮತ್ತು ದಸಸಂ ಪದಾಧಿಕಾರಿಗಳು ಉಪಸ್ಥಿತರಿದರು.