ಅವಸಾನದತ್ತ ಪಾರಂಪರಿಕ ಕಸಬು
ಕಲಬುರಗಿ,ಆ 7:ಈಗೆಲ್ಲ ಪ್ಲಾಸ್ಟಿಕ್ ವಸ್ತುಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಮೂಲ ವಸ್ತುಗಳನ್ನು ನೋಡಲು ಗ್ರಾಮೀಣ ಪ್ರದೇಶದಲ್ಲಿ ಹುಡುಕಿ ಹೋಗಬೇಕಾಗಿದೆ. ತಾಮ್ರ, ಹಿತ್ತಾಳೆ, ಕಬ್ಬಿಣದ ಬುಟ್ಟಿ, ಬಕೆಟ್, ಹರಿವಾಣ, ಗಂಗಾಳ ,ಮುಂತಾದವುಗಳಿಂದು ಪ್ಲಾಸ್ಟಿಕ್ ರೂಪದಲ್ಲಿ ಬರುತ್ತಿವೆ. ಅನೇಕ ಬಿದಿರಿನ ವಸ್ತುಗಳು ಕಾಣೆಯಾಗಿವೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಧಾನ್ಯಗಳನ್ನು ಸ್ವಚ್ಛಗೊಳಿಸುವ ಬಿದಿರಿನಿಂದ ತಯಾರಿಸಿದ ಮೊರಕ್ಕೆ ಬಣ್ಣ ಬಳಿದು ಉಪಯೋಗಿಸಲಾಗುತಿತ್ತು. ಮೊದಲು ಗೇರು ಎಣ್ಣೆ ಬಳಿಯಲಾಗುತ್ತಿತ್ತು ನಂತರ ಪೆಂಟ್ ಹಚ್ಚುವದು ಆರಂಭವಾಯಿತು.
ಇದರಿಂದ ಬಿದಿರಿನ ಮೊರದ ಸಂದುಗಳಲ್ಲಿ ಧಾನ್ಯ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಈಗ ಅವೆಲ್ಲವು ಮಾಯವಾಗಿವೆ. ಅಂದರೆ ಬಿದಿರು ಸಿಕ್ಕುವದು ಕಷ್ಟವಾಗಿರುವುದು ಒಂದು ಕಾರಣವಾದರೆ ಮತ್ತೊಂದು ಬಿದಿರುಗಿಂತ ಅಗ್ಗದ ದರದಲ್ಲಿ ಪ್ಲಾಸ್ಟಿಕ ಮೊರಗಳು ಸಿಗುವಾಗ ಮತ್ತು ಬಿದಿರಿನ ಸಿಬಿರುಗಳು ಕೈಗೆ ಚುಚ್ಚುತ್ತಿದ್ದವು. ಆದರೆ ಪ್ಲಾಸ್ಟಿಕ ಹಾಗಲ್ಲ ನುಣುಪಾಗಿರುತ್ತವೆ. ಹೀಗಾಗಿ ಬಳಷ್ಟು ಜನರು ಪ್ಲಾಸ್ಟಿಕ ಮೊರ ಖರೀದಿಸತೊಡಗಿದರು. ಇದರಿಂದ ಪೂರ್ವಜರಿಂದ ಮೊರಗಳಿಗೆ ಬಣ್ಣ ಬಳಿಯುತ್ತ ಬಂದವರು ಅದರಿಂದಲೇ ಉಪಜೀವನ ನಡೆಸುತ್ತಿರುವವರಿಗೆ ಈಗ ಸಂಕಷ್ಠ ಎದುರಾಗಿದೆ. ಇವರ ಉಪ ಜೀವನದ ದುಸ್ತರವಾಗಿ ಪರ್ಯಾಯ ಉದ್ಯೋಗ ಅರಸಿಕೊಂಡು ಊರೂರು ಅಲೆಯುವಂತಾಗಿದೆ .
ಮೊರಗಳಿಗೆ ಬಣ್ಣ ಹಾಕಲು ಅವರ ಪುರಾತನ ಪದ್ದತಿಯಂತೆ ರಾತ್ರಿ ರದ್ದಿ ಕಾಗದ ಹಾಗೂ ಮೆಂತೆ ನೀರಲ್ಲಿ ನೆನೆಸಿಡುತ್ತಿದ್ದರು. ಮೆಂತೆಯಿಂದ ಜಿಗಿ ಬರುತ್ತದೆ. ಅದನ್ನು ಬೆಳಿಗ್ಗೆ ಬಂಡೆ ಕಲ್ಲಿನ ಮೇಲೆ ಚನ್ನಾಗಿ ರುಬ್ಬುತ್ತಿದ್ದರು. ಜೊತೆಗೆ ಅದಕ್ಕೆ ಅರಿಶಿಣ ಬಣ್ಣ ಕಲಿಸುತಿದ್ದರು. ಆ ಪೆಸ್ಟನಿಂದ ಮೊರಕ್ಕೆ ಬಳಿಯುತಿದ್ದರು .ಇದರಿಂದ ಬಾಳಿಕೆ ಬರುತ್ತವೆ ಎಂಬುದು ಇವರ ಹೇಳಿಕೆ. ಒಂದು ಮೊರ ಬಣ್ಣ ಬಳಿದು ಕೊಟ್ಟರೆ ಹತ್ತೊ ಇಪ್ಪತ್ತೋ ರೂಪಾಯಿ ಕೊಡುತ್ತಿದ್ದರು. ಈ ಪೆಸ್ಟದೊಂದಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಊರೂರು ಅಲೆಯುತ್ತಿದ್ದರು. ಸೂಪರ್ ಬಜಾರಗಳು ತಲೆ ಎತ್ತಿದಾಗ ಅಲ್ಲಿ ಎಲ್ಲ ಯಂತ್ರದಿಂದ ಧಾನ್ಯಗಳನ್ನು ಸ್ವಚ್ಛಗೊಳಿಸಿ ಮಾರಾಟ ಮಾಡುವುದರಿಂದ ಈಗ ಹೆಣ್ಣುಮಕ್ಕಳಿಗೆ ಮರದ ಅವಶ್ಯಕತೆ ಇಲ್ಲದಂತಾಗಿದೆ.ಮೊರದಿಂದ ಧಾನ್ಯಗಳನ್ನು ಸ್ವಚ್ಛಗೊಳಿಸುವದು ಒಂದು ಕಲೆಯಾಗಿತ್ತು. ಅದು ಎಲ್ಲರಿಗೂ ಬರುವುದಿಲ್ಲ. ಈ ಯಾಂತ್ರಿಕ ಜೀವನದಲ್ಲಿ ಯಾರಿಗೆ ಧಾನ್ಯ ಸ್ವಚ್ಛಗೊಳಿಸಲು ಸಮಯವಿದೆ.
-ಗುರುರಾಜ.ಕೆ