ನೆಚ್ಚಿನ ಶಿಕ್ಷಕರ ವರ್ಗಾವಣೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
ಕೊಲ್ಹಾರ:ಆ.7:ತಾಲೂಕಿನ ಕೂಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ತಾನಾಜಿ ಯಾದವ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆ ಜರುಗಿತು.
ಮಕ್ಕಳ ಮತ್ತು ಶಿಕ್ಷಕರ ನಡುವೆ ವಿದ್ಯಾಭ್ಯಾಸದ ಜತೆ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಯುವುದು ಸರ್ಕಾರಿ ಶಾಲೆಗಳಲ್ಲಿಯೇ ಎನ್ನುದಕ್ಕೆ ತಾಜಾ ಉದಾಹರಣೆಗೆ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಯಿತು. ತಾನಾಜಿ ಯಾದವ ಎಂಬ ಶಿಕ್ಷಕರು ಕೂಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 23 ವರ್ಷಗಳಿಂದ ಸೇವೆ ಸಲ್ಲಿಸಿ ಸದ್ಯ ನಿಡಗುಂದಿ ತಾಲ್ಲೂಕಿನ ಗಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿರುವ ಪ್ರಯುಕ್ತ ಬೀಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಶಿಕ್ಷಕರ ವರ್ಗಾವಣೆಗೊಂಡ ಪ್ರಯುಕ್ತ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿರುವುದು ಕಂಡುಬಂದಿತು.
ಶಿಕ್ಷಕ ತಾನಾಜಿ ಯಾದವ ಅವರು ಮಕ್ಕಳನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಮಕ್ಕಳಿಗೆ ಹಿಂದಿ ವಿಷಯವನ್ನು ಸರಳ ರೀತಿಯಲ್ಲಿ ಮನ ಮುಟ್ಟುವಂತೆ ಬೋಧನೆ ಮಾಡುತ್ತಿದ್ದರು, ಅಲ್ಲದೆ ವಿದ್ಯಾರ್ಥಿಗಳಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುತ್ತಿದ್ದರು. ಅಷ್ಟೇ ಅಲ್ಲದೇ ಎಲ್ಲಾ ರಾಷ್ಟ್ರೀಯ ಹಬ್ಬಗಳಲ್ಲಿ ಇವರು ಮುಂದಾಳತ್ವ ವಹಿಸಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದ ಮಾದರಿ ಶಿಕ್ಷಕರಾಗಿದ್ದರು ಎಂದು ಗ್ರಾಮದ ಹಿರಿಯರು, ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರು ನೆನಪಿಸಿಕೊಳ್ಳುವುದು ಕಂಡುಬಂದಿತು ಒಟ್ಟಾರೆ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅವಿನಾಭಾವ ಸಂಬಂಧಕ್ಕೆ ಕೂಡಗಿ ಗ್ರಾಮ ಸಾಕ್ಷಿಯಾಯಿತು.