ಬಸವಾದಿ ಶರಣರ ವೈಚಾರಿಕ ವಿಚಾರ ಮೈಗೂಡಿಸಿಕೊಳ್ಳಿ: ತಹಸೀಲ್ದಾರ ಪಾಟೀಲ
ಆಳಂದ: ಆ.7:ಬಸವಾದಿ ಶರಣರ ವಚನಗಳ ಓದು ಜೀವನದಲ್ಲಿ ಅಳವಡಿಸಿಕೊಂಡು ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ಥಳೀಯ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಹೇಳಿದರು.
ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಆಯೋಜಿಸಿದ್ದ 12ನೇ ವರ್ಷದ ಒಂದು ತಿಂಗಳ ಕಾಲ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸ್ದಿ ಅವರು ಮಾತನಾಡಿದರು.
ಶರಣರು ಸಮಾನತೆ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಮೌಢ್ಯತೆಯನ್ನು ತೊಲಗಿಸಿ ವೈಜ್ಞಾನಿಕ ಆಧಾರದ ಮೇಲೆ ಬದುಕು ಕಟ್ಟಿಕೊಟ್ಟು ನಡೆ, ನುಡಿಯನ್ನು ಸಾಕ್ಷಾತಕರಿಸಿ ತೋರಿಸಿದ್ದಾರೆ. ಅವರ ವಚನಗಳ ಮೂಲಕ ನೀಡಿದ ಸಂದೇಶವು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿದೆ ವಚನಗಳು ಓದು ಮತ್ತು ಅರ್ಥವನ್ನು ಮಾಡಿಕೊಂಡರೆ ಬದುಕು ಹಸನಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಸ್ತುರಿ, ಧುತ್ತರಗಾಂವ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಶರಣರು ಧರ್ಮ, ಜಾತಿ, ಲಿಂಗ, ವರ್ಗ ಹಾಗೂ ವ್ಯಕ್ತಿಯ ಹಿತ ಬಯಸದೆ ಸಕಲ ಜೀವಾತ್ಮರ ಹಿತವನ್ನು ಬಯಸಿದರು ‘ ಎಂದು ಅವರ ಚಿಂತನೆ ಆಚರಣೆಗೆ ತಂದಾಗ ಮಾತ್ರ ಪರಿವರ್ತನೆ ತರಲು ಸಾಧ್ಯವಿದೆ. ಶರಣರು ದ್ವೇಷ ಬಿತ್ತುವ ಕಾರ್ಯ ಎಂದು ಮಾಡಿಲ್ಲ. ಮೌಢ್ಯದ ವಿರುದ್ಧ ಅವರು ಗುಡುಗಿದರು.
ವೀರಶೈವ ಸಮಾಜ ತಾಲೂಕು ಅಧ್ಯಕ್ಷ ಶರಣಬಸಪ್ಪ ಪಾಟೀಲ್, ಬಾಬುರಾವ ಮಡ್ಡೆ, ಪರಿಷತ್ತಿನ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು.
ನಿವೃತ್ತ ಶಿಕ್ಷಕ ಅಪ್ಪಾಸಾಹೇಬ ತೀರ್ಥೆ, ಪ್ರಭಾಕರ್ ಸಲಗರೆ, ದಯಾನಂದ ಶೇರಿಕಾರ, ಎಸ್.ಬಿ.ಪಾಟೀಲ, ರಮೇಶ ಮಾಡ್ಯಾಳಕರ, ಮಲ್ಲಿಕಾರ್ಜುನ ಪಡಶೆಟ್ಟಿ, ಮಲ್ಲಿನಾಥ ಯಲಶೆಟ್ಟಿ ಸೇರಿದಂತೆ ವಿವಿಧ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು,ಮಹಿಳೆಯರು ಭಾಗವಹಿಸಿದರು.
ಶ್ರೀಶೈಲ ಮಾಡ್ಯಾಳೆ ಸ್ವಾಗತಿಸಿದರು. ರಾಮಣ್ಣಾ ಸುತಾರ ನಿರೂಪಿಸಿದರು. ಎಲ್ ಎಸ್ ಬೀದಿ ವಂದಿಸಿದರು.