ಸೊನ್ನ ಬ್ಯಾರೇಜ್ ನಿಂದ 15 ಗೇಟ್ ಗಳ ಮೂಲಕ ನೀರು ಹೊರ ಹರಿವು
ಅಫಜಲಪುರ: ಆ.7:ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಹಾಗೂ ವೀರ್ ಜಲಾಶಯದಿಂದ ಭೀಮಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿ ಬಿಡುತ್ತಿದ್ದು, ಹೀಗಾಗಿ ನದಿ ದಡದಲ್ಲಿರುವ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಭೀಮಾ ನದಿಯ ಸೊನ್ನ ಬ್ಯಾರೇಜ್ ಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹಾಗೂ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈಗ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ನೀರಿನ ಪ್ರಮಾಣವು ಕಡಿಮೆ ಆಗಲಿದೆ,ಈಗ ಅಲ್ಲಿಂದ ಬರುವ ನೀರಿನ ಪ್ರಮಾಣ ನೋಡಿಕೊಂಡು ಮುಂದೆ ಎಷ್ಟು ನೀರು ಹಿಡಿದಿಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಚಿಂತಿಸಲಾಗುವುದು.ನದಿ ದಡದಲ್ಲಿರುವ ಗ್ರಾಮಸ್ಥರು ಜಾಗೃತಿ ವಹಿಸಿ,ಆದರೆ ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ,2020ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಬಂದು ಸಾಕಷ್ಟು ಹಾನಿ ಆಗಿತ್ತು.ಈ ಬಾರಿ ಆ ರೀತಿ ಆಗುವುದಿಲ್ಲ,ಸುಖಾಸುಮ್ಮನೆ ನದಿ ಕಡೆ ಸಾರ್ವಜನಿಕರು ಹೋಗಬಾರದು ಎಂದು ತಿಳಿಸಿದರು.
ಸೊನ್ನ ಬ್ಯಾರೇಜ್ ಗೇಟ್ ಗಳು ಪರಿಶೀಲನೆ.
ಅಫಜಲಪುರ ತಾಲೂಕಿನ ಸೊನ್ನ ಭೀಮಾ ಬ್ಯಾರೇಜ್ ಗೆ ಭೇಟಿದ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್,ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಖುದ್ದಾಗಿ ಬ್ಯಾರೇಜ್ ಮೇಲೆ ಹತ್ತಿ ಗೇಟ್ ಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂದು ಪರಿಶೀಲನೆ ನಡೆಸಿ 29 ಗೇಟ್ ಗಳಲ್ಲಿ 15 ಗೇಟ್ ಮೂಲಕ ನೀರು ಹೊರ ಹರಿವು ಆಗುತ್ತಿದ್ದು,ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಭೀಮಾ ಏತ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರಾದ ಸಂತೋಷಕುಮಾರ ಸಜ್ಜನ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ರಾಮಚಂದ್ರ ಗಡದೆ, ಸೂರ್ಯಕಾಂತ ಮಾಲೆ, ಸಮದ್ ಪಟೇಲ್, ಸಂಜೀವಕುಮಾರ ದಾಸರ, ಸುರೇಶ್ ಚವಾಣ್, ಈರಣ್ಣ ಕೌಲಗಿ,ಎಫ್.ಎಚ್.ಪಠಾಣ,ಎಸ್.ಎಚ್.ಗಡಗಿಮನಿ, ಗುರುಲಿಂಗಪ್ಪ ಪಾಣೇಗಾಂವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.