ಸ್ತ್ರೀಯರ ಸಾಕ್ಷರತಾ ಪ್ರಮಾಣ ಕಡಿಮೆಯಿದೆ: ಸುಜಾತಾ
ತಾಳಿಕೋಟೆ:ಆ.7: ಮಹಿಳೆಯರು ಸ್ವಾವಲಂಬಿಯಾಗಿ ಬಧುಕಬೇಕಾದರೆ ಶಿಕ್ಷಣ ಕಲಿಯುವದು ಅಗತ್ಯವಾಗಿದ್ದು ಈ ಕುರಿತು ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಾ ಸಾಗಿದ್ದರೂ ಸ್ತ್ರೀಯರ ಸಾಕ್ಷರತಾ ಪ್ರಮಾಣ ಕಡಿಮೆ ಇದೆ ಎಂದು ಸ್ಥಳೀಯ ತಾಲೂಕಾ ಪಂಚಾಯತ್ ಪ್ರಭಾರಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಜಾತಾ ಯಡ್ರಾಮಿ ಅವರು ನುಡಿದರು.
ಇತ್ತೀಚಗೆ ಪಟ್ಟಣದ ಎಸ್.ಕೆ.ಕೆ.ಪಿ.ಎಂ.ಜಿ.ಸಿ.ಎಂ. ಬಾಲಕೀಯರ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾದ 2024-25ನೇ ಸಾಲಿನ ಶಾಲಾ ಸಂಸತ್ತ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಕೇರಳದಲ್ಲಿ ಸ್ತ್ರೀಯರ ಹಾಗೂ ಪುರುಷರ ಸಾಕ್ಷರತಾ ಪ್ರಮಾಣ ಎರಡೂ ಸಮನಾಗಿವೆ ಆದರೆ ನಮ್ಮ ದೇಶದಲ್ಲಿ ಸ್ತ್ರೀಯರ ಸಾಕ್ಷರತಾ ಪ್ರಮಾಣ ಕಡಿಮೆ ಇದೆ ಇದಕ್ಕೆ ಬಡತನವೇ ಕಾರಣವಾಗಿದೆ ಎಂದರು. ಮಕ್ಕಳನ್ನು ಆದಾಯ ಮೂಲವಾಗಿ ಅಲ್ಲಲ್ಲಿ ಕೆಲಸ ಕಾರ್ಯಗಳಿಗೆ ದೂಡಲಾಗುತ್ತಿದೆ ಅಲ್ಲದೇ ಕೂಡಲೇ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿಕೊಡಲಾಗುತ್ತದೆ ಇದು ಅಲ್ಲದೇ ಮಾತಾಪಿತರು ಶಿಕ್ಷಣಕ್ಕೆ ಒತ್ತು ಕೊಡದೇ ಇದ್ದ ಕಾರಣದಿಂದ ಶಿಕ್ಷಣದಿಂದ ಹೆಣ್ಣು ಮಕ್ಕಳು ಹಿಂದೆ ಉಳಿಯಲು ಕಾರಣವಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀಮತಿ ಸುಜಾತಾ ಅವರು ಸರ್ಕಾರದ ಯೋಜನೆಗಳಿಗೆ ಸ್ಪಂದಿಸುವ ಕಾರ್ಯವಾಗಬೇಕು ಶಾಲೆಗಳು ಸಮಿಪವಿರಬೇಕು, ವಾಹನ ಸೌಲಭ್ಯಗಳಿರಬೇಕು, ಕಲೆ ಕೌಶಲ್ಯಗಳನ್ನು ಕಲಿಸುವ ಕಾರ್ಯವಾಗಬೇಕು ಮಹಿಳಾ ಶಿಕ್ಷಕರು ಶಿಕ್ಷಣ ನೀಡಲು ಹೆಚ್ಚಾಗಬೇಕು ಇದರಿಂದ ಪಾಲಕರು ಸಹ ನಿರ್ಭಿತಿಯಿಂದ ಮಹಿಳಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬಹುದೆಂದು ಹೇಳಿದ ಅವರು ಶಾಲಾ ವಿದ್ಯಾರ್ಥಿನಿಯರು ಪಾಲಕರನ್ನು ಶಿಕ್ಷಕರನ್ನು ಗೌರವಿಸಿ ಅವರ ಹಿತ ನುಡಿಗಳನ್ನು ಆಲಿಸಿ ಪಾಲಿಸಿದರೆ ಉನ್ನತ ಸ್ಥಾನಮಾನ ಪಡೆಯಲಿದ್ದೀರಿ ಎಂದು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ವೀ.ವಿ.ಸಂಘದ ಸದಸ್ಯ ಪ್ರಭುಗೌಡ ಮದರಕಲ್ಲ ಅವರು ಮಾತನಾಡಿ ಶಾಲೆಗಳಲ್ಲಿಯ ಪಾಠ ಆಲಿಸುವದರೊಂದಿಗೆ ಪಾಲಿಸುವ ಕಾರ್ಯ ಮಾಡಿದರೆ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಬರುತ್ತದೆ ಶಾಲೆಗಳ ಏಳಿಗೆಗಾಗಿ ಶ್ರಮಿಸುತ್ತಾ ಸಾಗಿದರೆ ಸಾಕ್ಷರತಾ ಪ್ರಮಾಣವೆಂಬುದು ಹೆಚ್ಚಾಗುತ್ತದೆ ಹೆಣ್ಣು ಮಕ್ಕಳಿಗೆ ಶಿಕ್ಷಣದಿಂದ ತಮಗಿರುವಂತಹ ಹಕ್ಕು ಭಾದ್ಯತೆಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದ ಪ್ರಭುಗೌಡ ಅವರು ವೀ.ವಿ.ಸಂಘದಿಂದ ನಡೆಸಲಾಗುತ್ತಿರುವ ಎಲ್ಲ ಶಾಲೆಗಳ ಕಾಲೇಜುಗಳಲ್ಲಿ ಒಳ್ಳೆಯ ಶಿಕ್ಷಣ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದ ಅವರು ಇಂದಿನ ದಿನಮಾನದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಪಕ್ಷಪಾತ ಕುರಿತು ಹೋರಾಡಲು ಶಿಕ್ಷಣವೆಂಬುದು ಅಗತ್ಯವಾಗಿದೆ ಎಂದರು.
ಇದೇ ಸಮಯದಲ್ಲಿ ಅದೇ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ.ಬಿ.ಭಂಟನೂರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತಲ್ಲದೇ ನಿವೃತ್ತ ಮುಖ್ಯೋಪಾಧ್ಯಾಯ ಭಂಟನೂರ ಅವರು ಕಳೆದ 35 ವರ್ಷಗಳಿಂದ ತಾವು ಸಲ್ಲಿಸಿದ ಸತತ ಸಾರ್ಥಕ ಸೇವೆಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ನೀಡಿದ ಸಹಕಾರ ಕುರಿತು ಗುಣಗಾನ ಮಾಡಿದರಲ್ಲದೇ ನಿವೃತ್ತವೆಂಬುದು ಪ್ರತಿಯೊಬ್ಬ ಶಿಕ್ಷಕನಿಗೆ ಬಂದೇ ಬರುತ್ತದೆ ಆದರೆ ಶಾಲೆಯಲ್ಲಿ 35 ವರ್ಷ ಕಳೆದ ಒಡನಾಟ ಎಂದೂ ಮರೆಮಾಚದೆಂದು ಭಾವುಕರಾಗಿ ನುಡಿದ ಅವರು ಎಲ್ಲರೂ ನೀಡಿದ ಸಹಕಾರ ಕುರಿತು ಸ್ಮರಿಸಿದರು.
ಅಧ್ಯಕ್ಷ ಸ್ಥಾನ ಅಲಂಕರಿಸಿದ ಎಸ್.ಕೆ.ಕೆ.ಪಿ.ಎಂ.ಜಿ.ಸಿ.ಎಂ. ಬಾಲಕೀಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವಾಯ್.ಎಸ್.ನಾದ ಅವರು ಶಾಲಾ ಮಕ್ಕಳ ಕಲಿಕೆ ಹೇಗಿರಬೇಕು ಮಾತಾಪಿತರನ್ನು ಹಾಗೂ ಶಿಕ್ಷಕರನ್ನು ಗೌರವದಿಂದ ಕಾಣುವ ಕುರಿತು ಭಹುಮಾರ್ಮಿಕವಾಗಿ ವಿವರಿಸಿ ನಿವೃತ್ತ ಮುಖ್ಯೋಪಾದ್ಯಾಯ ಪಿ.ಬಿ.ಭಂಟನೂರ ಅವರು ತಮ್ಮ ಸೇವಾ ಅವದಿಯಲ್ಲಿ ಎಲ್ಲರೊಂದಿಗೆ ಬೆರೆತು ಪ್ರೀತಿ ಪ್ರೇಮ ಗಳಿಸಿದಂತೆ ತಾವು ಕೂಡಾ ಗಳಿಸಿಕೊಳ್ಳುವದಾಗಿ ಹೇಳಿ ಎಲ್ಲರ ಸಹಕಾರ ಕೋರಿದರು.
ಈ ಸಮಾರಂಭದ ದಿವ್ಯ ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ ಇಂದಿನ ದಿನಮಾನದಲ್ಲಿ ಹೊಸ ತಂತ್ರಜ್ಞಾನವನ್ನು ತಿಳಿದುಕೊಳ್ಳಲು ಹೊಸ ಜವಾಬ್ದಾರಿ ನಿಭಾಯಿಸಿಕೊಳ್ಳಲು ಶಿಕ್ಷಣವೆಂಬುದು ಅಗತ್ಯವಾಗಿದೆ ಪುರುಷರಷ್ಟೇ ಸ್ತ್ರೀಯರ ಶಿಕ್ಷಣ ಅಗತ್ಯವಾಗಬೇಕಾಗಿದೆ ಇಂತಹದ್ದರಿಂದ ಸಮಾಜ ದೇಶ ತನ್ನನ್ನು ತಾನು ಸುದಾರಿಸಿಕೊಳ್ಳಲು ಸಾದ್ಯವಾಗಲಿದೆ ಎಂದು ಹೇಳಿದ ಅವರು ಶಿಕ್ಷಣ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದರು.
ಇದೇ ಸಮಯದಲ್ಲಿ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಶಿಕ್ಷಕಿ ಎಂ.ಆರ್.ಕುಲಕರ್ಣಿ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಭೋದಿಸಿದರು.
ವೇದಿಕೆಯ ಮೇಲೆ ಪ್ರೌಢ ಶಾಲಾ ಅಧ್ಯಕ್ಷ ಆಯ್.ಬಿ.ಬಿಳೇಭಾವಿ ಅವರು ಉಪಸ್ಥಿತರಿದ್ದರು.
ಶಿಕ್ಷಕಿ ಪಿ.ಬಿ.ದೇಶಮುಖ ಸ್ವಾಗತಿಸಿದರು. ಶಿಕ್ಷಕಿ ಪಿ.ಪಿ.ಬಸರಕೋಡ ವಂದಿಸಿದರು.