ಸೂಕ್ತ ಮಾಹಿತಿಯೊಂದಿಗೆ ತೋಟಗಾರಿಕೆ ಕೃಷಿ ಮಾಡುವುದು ಅಗತ್ಯ
ಕಲಬುರಗಿ:ಆ.7: ರೈತರು ನೀರಾವರಿ ಬಳಕೆಯ ವಿಧಾನ, ಗೊಬ್ಬರ, ಬೀಜಗಳು ಮತ್ತು ಕ್ರಿಮಿ ಕೀಟನಾಶಗಳ ಬಳಕೆಯ ಬಗೆ, ಮಣ್ಣು ಪರೀಕ್ಷೆ, ಬೀಜೋಪಚಾರ ಸೇರಿದಂತೆ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು, ಕೃಷಿ ತಜ್ಞರ ಸಲಹೆ, ಸೂಕ್ತ ಮಾಹಿತಿಯನ್ನು ಪಡೆದು ತೋಟಗಾರಿಕೆ ಕೃಷಿಯನ್ನು ಮಾಡಿದರೆ ಉತ್ತಮ ಫಸಲು ಪಡೆದು ಕೃಷಿ ಲಾಭದಾಯಕವಾಗಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಸಹಾಯಕ ಕೃಷಿ ಅಧಿಕಾರ ಶಿವಯೋಗೆಪ್ಪಾ ಎಸ್.ಬಿರಾದಾರ ಸಲಹೆ ನೀಡಿದರು.
ಆಳಂದ ರಸ್ತೆಯ ಸುಂಟನೂರ ಕ್ರಾಸ್ ಸಮೀಪವಿರುವ ಪ್ರಗತಿಪರ ರೈತ ಚಂದ್ರಶ್ಯಾ ಇಟಗಿ ಅವರ ತೋಟದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ಕ್ಷೇತ್ರ ಭೇಟಿ ಮತ್ತು ಪ್ರಗತಿಪರ ರೈತರಿಗೆ ಗೌರವ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮಳೆ ಅವಲಂಬಿತ ಒಣ ಬೇಸಾಯ ಮಾಡಿದರೆ ಉತ್ತಮ ಇಳುವರಿ ಪಡೆಯದೆ ನಷ್ಟ ಅನುಭವಿಸಿ ತೊಂದರೆಗೊಳಗಾಗುತ್ತಾರೆ. ಕಷ್ಟಪಟ್ಟು ದುಡಿಯುವ ಪ್ರವೃತ್ತಿ ಬೆಳೆಸಿಕೊಂಡು ನೀರಾವರಿ ವ್ಯವಸಾಯ ಮಾಡಿ, ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ರೈತ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದು ನುಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಚಂದ್ರಶ್ಯಾ ಇಟಗಿ, ನಾನು ಮಿಶ್ರ ಬೆಳೆ, ಸಾವಯುವ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದೇನೆ. ಈಗ 30 ಗುಂಟೆಯಲ್ಲಿ ಬದನಕಾಯಿ ಇದ್ದು, ಅದಕ್ಕೆ ತೊಂದರೆ ಉಂಟುಮಾಡುವ ನೊರಜಿನ ನಾಶಕ್ಕಾಗಿ ಒಳಗಡೆ ಅಲ್ಲಲ್ಲಿ ನೊರಜನ್ನು ಹೀರುವ ಫಲಕ, ಚೆಂಡುಹೂವು, ಮೆಕ್ಕೆಜೋಳ ಹಾಕಲಾಗಿದೆ. ಇದರಿಂದ ಜೈವಿಕ ಕೀಟ ನಇಯಂತ್ರಣ ಸಾಧ್ಯವಿದೆ. 10 ಗುಂಟೆಯಲ್ಲಿ ಮೆಣಸಿನ ಗಿಡಗಳಿವೆ. ಕಳೆದ ವರ್ಷ ಮೂರು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆದು 10 ಲಕ್ಷ ರೂಪಾಯಿ ಆದಾಯ ಪಡೆದಿದ್ದೇನೆ. ಭಕ್ತಿಯಿಂದ ಕೃಷಿ ಕಾಯಕ ಮಾಡಿದರೆ ರೈತರು ನಷ್ಟ ಅನುಭವಿಸಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸದ ನುಡಿಗಳನ್ನಾಡಿದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಶರಣಬಸಪ್ಪ ಇಟಗಿ, ಲಕ್ಕಣ್ಣ ಜಮಾದಾರ, ರಾಜು ಕಾಮಣ್ಣ, ಕಸ್ತುರಬಾಯಿ ಹಡಪದ ಸೇರಿದಂತೆ ಇನ್ನಿತರರಿದ್ದರು.