ಬಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಲು ಮನವಿ
ಬೀದರ:ಆ.7: ಬೀದರ ಜಿಲ್ಲೆಯಲ್ಲಿ ರೈತರಿಗೆ ಸಾವಿರಾರು ಸಮಸ್ಯೆಗಳಿದ್ದು, ಅದರಲ್ಲಿ ಬಿ.ಎಸ್.ಎಸ್.ಕೆ. ಕಾರ್ಖಾನೆಯು ಬೀದರ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಜೊತೆಗೆ ಬೀದರ ಜಿಲ್ಲೆಯ ರಾಜಕಾರಣಿಗಳು ಈ ಕಾರ್ಖಾನೆಯ ಮೇಲೆ ರಾಜಕೀಯ ಮಾಡಿ, ಮುಂದುವರೆದಿದ್ದಾರೆ. ಆದರೆ ಈವಾಗ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆಯು ಸುಮಾರು 3 ವರ್ಷಗಳಿಂದ ಮುಚ್ಚಲ್ಪಟ್ಟಿದ್ದು, ಜಿಲ್ಲೆಯ ಯಾವ ರಾಜಕೀಯ ವ್ಯಕ್ತಿಯು ಕಾರ್ಖಾನೆ ಪುನಶ್ಚೇತನದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಮೊನ್ನೆ ಡಿ.ಸಿ.ಸಿ. ಬ್ಯಾಂಕಿನವರು ಕಾರ್ಖಾನೆಯ ಸಾಲಕ್ಕಾಗಿ, ಕಾರ್ಖಾನೆ ಹಾಗೂ ಅದರ ಎಲ್ಲಾ ಆಸ್ತಿ ಜಪ್ತಿ ಮಾಡಿದ್ದು, ಬೀದರ ಜಿಲ್ಲೆಯ ರೈತರಿಗೆ ಮಾಡಿರುವ ಅವಮಾನ ಹಾಗೂ ದು:ಖದ ಸಂಗತಿ.
ರಾಜ್ಯದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಸಾಲದ ಸುಳಿಯಲ್ಲಿ ಸಿಲುಕಿ ಮುಚ್ಚಿದಾಗ ರಾಜ್ಯ ಸರ್ಕಾರವೇ ಹಣವನ್ನು ಕೊಟ್ಟು, ಕಾರ್ಖಾನೆಗಳು ಪುನಶ್ಚೇತನ ಮಾಡಿರುವ ಉದಾಹರಣೆಗಳು ಬಹಳಷ್ಟಿವೆ.
ಬೀದರ ಜಿಲ್ಲೆಯ ಬಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆಗೆ ಸರ್ಕಾರದ ವತಿಯಿಂದ ಹಣ ಕೊಟ್ಟು, ಪುನಶ್ಚೇತನ ಮಾಡಿ, ಕಾರ್ಖಾನೆ ಉಳಿಸಿಕೊಂಡು, ತಾವುಗಳು ರೈತಪರ ಇದ್ದೀರಿ ಎಂದು ತೋರಿಸಿಕೊಡಬೇಕು ಹಾಗೂ ಬೀದರ ಜಿಲ್ಲೆಯ ರೈತರ ಆಶೀರ್ವಾದ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ತಮಗೆ ಒತ್ತಾಯಿಸುತ್ತೇವೆ.
ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಜಿಲ್ಲಾ ಅಧ್ಯಕ್ಷರಾದ ಸಿದ್ರಾಮಪ್ಪಾ ಆಣದೂರೆ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರ.ಕಾರ್ಯದರ್ಶಿಗಲಾದ ದಯಾನಂದ ಸ್ವಾಮಿ ಸಿರ್ಸಿ, ಪ್ರವೀಣ ಕುಲಕರ್ಣಿ, ಚಂದ್ರಶೇಖರ ಜಮಖಂಡಿ, ಶಂಕರೆಪ್ಪ ಪಾರಾ, ಪ್ರಕಾಶ ಬಾವಗೆ, ನಾಗಯ್ಯ ಸ್ವಾಮಿ, ಸುಭಾಷ ರಗಟೆ, ರಾಮರಾವ ಕೇರೂರೆ, ವಿಶ್ವನಾಥ ಧರಣೆ, ರೇವಣಸಿದಪ್ಪಾ ಯರಬಾಗ, ಝರಣಪ್ಪ ದೇಶಮುಖ, ಮಲ್ಲಿಕಾರ್ಜುನ ಚಕ್ಕಿ, ಬಸಪ್ಪಾ ಆಲೂರೆ ಉಪಸ್ಥಿತರಿದ್ದರು.