ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ ಶರಣಗೌಡ
ದೇವದುರ್ಗ:ಆ.೦೭-
ಮಹಿಳೆಯರಿಗೆ ಸರ್ವ ಕ್ಷೇತ್ರದಲ್ಲಿ ಸಂವಿಧಾನಾತ್ಮಕ ಸಮಾನ ಅವಕಾಶ ಕಲ್ಪಿಸಿದ ಮಹಾನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶರಣಗೌಡ ಮಾಲಿ ಪಾಟೀಲ್ ಹೇಳಿದರು.
ತಾಲೂಕಿನ ಕೊಪ್ಪರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಗಬ್ಬೂರಿನ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ) ಆಯೋಜಿಸಿದ್ದ “ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ” ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದಡಿಯಲ್ಲಿ ಜೀವಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ದೇವರಿದ್ದಾನೆ ಎಂದರೆ ಅದು ನಮ್ಮ ದೇಶಕ್ಕೆ ಆದರ್ಶ ಸಂವಿಧಾನ ಕೊಟ್ಟ ಅಂಬೇಡ್ಕರ್ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪಿ ಎಸ್. ಐ. ಹನುಮಂತ್ರಾಯ ಎಸ್.ಪಟೇದ್ ಉಪನ್ಯಾಸ ನೀಡಿದರು. ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಬಸವರಾಜ ಕೊಪ್ಪರ ಸಂವಿಧಾನ ಪೀಠಿಕೆ ಬೋಧಿಸಿದರು. ಹಿರಿಯ ಶಿಕ್ಷಕ ಶಂಭುಲಿಂಗ ನಾಯಕ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಸಂವಿಧಾನ ಕುರಿತು ಮಾತನಾಡಿದರು. ಸಂಸ್ಥೆ ಸಂಚಾಲಕ ಗುರುನಾಥ ಇಂಗಳದಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ನಮ್ಮ ಸಂವಿಧಾನವು ಎದುರಿಸುತ್ತಿರುವ ಸವಾಲುಗಳ ಬಗೆಗೆ ವಿದ್ಯಾರ್ಥಿ ಯುವ ಸಮುದಾಯಕ್ಕೆ ವಿಶೇಷವಾಗಿ ಪ್ರೌಢ ಶಾಲಾ ಹಂತದಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ತಲುಪಿಸುವದು ಮುಖ್ಯ ವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಗುರು ರಮೇಶ ಕಟ್ಟಿಮನಿ ವಹಿಸಿದ್ದರು.
ಸಂವಿಧಾನದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತೆರಾದ ಉದಯಕುಮಾರ, ಮಮತಾ, ಅಂಬಿಕಾ, ಪಲ್ಲವಿ, ಶೀಲಾವತಿ, ಶಿಲ್ಪಾ, ಮಹಾಲಕ್ಷ್ಮಿ, ಸಿದ್ದಮ್ಮ, ಅನಿತಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹಾಗೆಯೇ ಶಾಲಾ ಗ್ರಂಥಾಲಯ ಗಳಿಗೆ ಸಂವಿಧಾನದ ಪೀಠಿಕೆ, ಡಾ? ಸಿ.ಎಸ್. ದ್ವಾರಕನಾಥ ಅವರು ಸಂಪಾದಿಸಿ, ಸಂಸ್ಕರಣೆ ಮಾಡಿ,ಸಂಗ್ರಹಿಸಿರುವ ’ಭಾರತದ ಸಂವಿ ಧಾನ’, ನ್ಯಾ|| ಎಚ್. ಎನ್. ನಾಗಮೋಹನದಾಸ ಅವರು ರಚಿಸಿರುವ ’ಸಂವಿಧಾನದ ಓದು’, ವಾಣಿ ಪೆರಿಯೋಡಿ ಅವರು ರಚಿಸಿರುವ ’ಮಕ್ಕಳಿಗಾಗಿ ಸಂವಿಧಾನ’ ಪುಸ್ತಕಗಳನ್ನು ಸಂಸ್ಥೆ ವತಿಯಿಂದ ವಿತರಿಸಲಾಯಿತು.
ವೇದಿಕೆಯಲ್ಲಿ ವಕ್ಫ್ ಬೋರ್ಡ್ ಜಿಲ್ಲಾ ಸಮಿತಿ ಸದಸ್ಯರಾದ ಸುಲ್ತಾನಬಾಬು, ಎಸ್.ಡಿ.ಎಂ.ಸಿ ಅಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯ ಬಾಬು, ಶಿಕ್ಷಕರಾದ ಉಮೇಶ್, ಶಹನಾಜ್ ಬೇಗಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶ್ರೀದೇವಿ ಸಂಗಡಿಗರ ಪ್ರಾರ್ಥನೆ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶಿಕ್ಷಕ ಧನಂಜಯ ಸ್ವಾಗತಿಸಿದರೆ, ಮಲ್ಲಿಕಾರ್ಜುನ ಭುಜನ್ನವರು ನಿರೂಪಿಸಿದರು. ಹನುಮಂತ ವಂದಿಸಿದರು.ಪೋಟೋ೭ಡಿವಿಡಿ.೧