ಅಕ್ಕಮಹಾದೇವಿ ಜೀವನ ಮಹಿಳಾ ಕುಲಕ್ಕೆ ಪ್ರೇರಣೆ
ಭಾಲ್ಕಿ:ಆ.7:ಕನ್ನಡದ ಪ್ರಪ್ರಥಮ ಕವಯತ್ರಿ ಅಕ್ಕಮಹಾದೇವಿ ಅವರ ಜೀವನ ಮತ್ತು ಸಾಧನೆ ಮಹಿಳಾ ಕುಲಕ್ಕೆ ಪ್ರೇರಣೆಯಾಗಿದೆ ಎಂದು ಹಲಬರ್ಗಾ ಶರಣಗಿರಿ ಮಹಾಮಠದ ಮಹಿಳಾ ಪೀಠಾಧ್ಯಕ್ಷೆ ಮಾತೆ ಬಸವಾಂಜಲಿ ತಾಯಿ ಹೇಳಿದರು.
ತಾಲೂಕಿನ ಜ್ಯಾಂತಿ ಗ್ರಾಮದ ಮಲ್ಲಿಕಾರ್ಜುನ ದೇಗುಲದ ಸಭಾಂಗಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜೀವನ ಸಾಧನೆ ಕುರಿತು ಪ್ರವಚನ ನೀಡಿದರು.
ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.
ಮಹಿಳೆಯರು ಮನೆಯಿಂದ ಹೊರಬಾರದ ಸಂದರ್ಭದಲ್ಲಿ ಎಲ್ಲ ವೈಭವನ್ನು ಧಿಕ್ಕರಿಸಿದ ಅಕ್ಕ ದಿಟ್ಟತನ ತೋರಿಸಿ ಮಹಿಳೆಯರು ಕೂಡ ಸಮಾಜದಲ್ಲಿ ಪುರುಷರಂತೆ ಸರಿಸಮನಾಗಿ ಬದುಕು ಸಾಗಿಸಬಹುದು ಎನ್ನುವುದನ್ನು ಸಾಧಿಸಿ ತೋರಿಸಿದರು.
ಅಕ್ಕನವರ 400-500 ವಚನಗಳು ನಮಗೆ ದಕ್ಕಿವೆ. ಅವರ ವಚನಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ. ಪ್ರತಿಯೊಬ್ಬರು ಅಕ್ಕನ ದಾರಿಯಲ್ಲಿ ಸಾಗಿ ಸುಂದರ ಜೀವನ ರೂಪಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಪ್ರವಚನ ಉದ್ಘಾಟಿಸಿದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಮಾತನಾಡಿ, ವ್ಯಕ್ತಿಯ ಮನದ ಮೈಲಿಗೆ ತೊಳೆಯಲು ಮತ್ತು ದೇವರ ಸಾಮೀಪ್ಯಕ್ಕೆ ಕೊಂಡೊಯ್ಯುವ ಅದ್ಭುತ ಶಕ್ತಿ ಪ್ರವಚನದಲ್ಲಿದೆ. ಮಾತೆ ಬಸವಾಂಜಲಿ ತಾಯಿ ಅವರು ತಿಂಗಳ ಪಯರ್ಂತ ಪ್ರವಚನ ನಡೆಸಿ ಕೊಡುತ್ತಿದ್ದು ಪ್ರತಿಯೊಬ್ಬರು ತಪ್ಪದೇ ಆಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ರವೀಂದ್ರ ಪಾಟೀಲ್, ವಿಜಯಕುಮಾರ ಹಣಮಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಸಂತೋಷ ಪಾಟೀಲ್, ಪ್ರಮುಖರಾದ ಶಂಕರ ಬಿರಾದಾರ್, ವೈಜಿನಾಥ ಶೆಟಕಾರ್, ಶ್ರೀಕಾಂತ ಬಿಲಗುಂದೆ, ಕಮಲಾಕರ ಫುಲಾರಿ, ಮಲ್ಲಿಕಾರ್ಜುನ ಬಿಲಗುಂದೆ ಸೇರಿದಂತೆ ಹಲವರು ಇದ್ದರು. ಪ್ರಭು ಬಿಲಗುಂದೆ ನಿರೂಪಿಸಿ, ವಂದಿಸಿದರು.
ಮನುಷ್ಯನ ಹೃದಯ ಶ್ರೀಮಂತಿಕೆ ಹೆಚ್ಚಿಸಲು ಪ್ರವಚನ ಪೂರಕವಾಗಿವೆ. ಸಂತರು, ಶರಣರು, ಮಹಾತ್ಮರು ನಡೆಸಿಕೊಡುವ ಪ್ರವಚನವನ್ನು ಪ್ರತಿಯೊಬ್ಬರು ಆಲಿಸಿ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬೇಕು.