ತುಮಕೂರು ವಿವಿ ಘಟಿಕೋತ್ಸವ ಪ್ರಸನ್ನಾನಂದ ಸ್ವಾಮೀಜಿ ಸೇರಿ ಮೂವರಿಗೆ ಗೌಡಾ ಪ್ರದಾನ
ತುಮಕೂರು, ಆ. ೭- ಶೈಕ್ಷಣಿಕ ನಗರಿ ಕಲ್ಪತರುನಾಡಿನ ಮುಕುಟ ಮಣಿ, ಜ್ಞಾನವೇ ಅನಂತ ತುಮಕೂರು ವಿಶ್ವವಿದ್ಯಾನಿಲಯದಲ್ಲಿಂದು ನಡೆದ ೧೭ನೇ ವಾರ್ಷಿಕ ಘಟಿಕೋತ್ಸವದಲ್ಲಿ ೧೧೯೮೮ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಕಚೇರಿ ಮುಂಭಾಗದ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯವಾದ ವೇದಿಕೆಯಲ್ಲಿ ನಡೆದ ೧೭ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮೂವರಿಗೆ ಡಿ.ಲಿಟ್ ಪದವಿ, ೩೬ ಅಭ್ಯರ್ಥಿಗಳಿಗೆ ಪಿಎಚ್.ಡಿ. ಪದವಿ, ೧೭೫೮ ಅಭ್ಯರ್ಥಿಗಳಿಗೆ ಸ್ನಾತಕೋತ್ತರ, ೧೦೨೩೦ ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ೧೧೯೮೮ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಶುಭ ಹಾರೈಸಿದರು.
ಗೌಡಾ ಪ್ರದಾನ
ಪ್ರತಿ ವರ್ಷ ತುಮಕೂರು ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಗೌರವ ಡಾಕ್ಟರೆಟ್ ಪದವಿಯನ್ನು ಈ ಬಾರಿ ಕ್ರೀಡಾಪಟು ಹಾಗೂ ಸಮಾಜ ಸೇವಕ ಎಸ್.ಸಿ. ನಾಗಾನಂದಸ್ವಾಮಿ, ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ಹಾಗೂ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರಿಗೆ ರಾಜ್ಯಪಾಲರು ಪ್ರದಾನ ಮಾಡಿ ಗೌರವಿಸಿದರು.
೯೮ ಸ್ವರ್ಣ ಪದಕ
ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ೭೪ ವಿದ್ಯಾರ್ಥಿಗಳಿಗೆ ೯೮ ಚಿನ್ನದ ಪದಕಗಳನ್ನು ರಾಜ್ಯಪಾಲರು ಪ್ರದಾನ ಮಾಡಿ ಪ್ರೋತ್ಸಾಹಿಸಿದರು.
ರಾಮುಗೆ ೬ ಚಿನ್ನದ ಪದಕ
ತುಮಕೂರು ವಿವಿಯ ಡಾ. ಡಿ.ವಿ. ಗುಂಡಪ್ಪ ಅಧ್ಯಯನ ಕೇಂದ್ರದ ಎಂ.ಎ. ಕನ್ನಡ ವಿಭಾಗದಲ್ಲಿ ರಾಮು ಎಂಬ ವಿದ್ಯಾರ್ಥಿ ೬ ಚಿನ್ನದ ಪದಕ ಪಡೆಯುವ ಮೂಲಕ ಘಟಿಕೋತ್ಸವದಲ್ಲಿ ನೆರೆದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಎಂ.ಎಸ್ಸಿ ಪರಿಸರ ವಿಜ್ಞಾನ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಮ್ಯಶ್ರೀ ಎ. ಮೂರು ಚಿನ್ನದ ಪದಕ, ಎಂ.ಎಸ್ಸಿ ಗಣಿತಶಾಸ್ತ್ರದಲ್ಲಿ ಪವಿತ್ರ ಕೆ.ಪಿ. ೩ ಚಿನ್ನದ ಪದಕ, ಎಂ.ಕಾಂ. ಪದವಿಯಲ್ಲಿ ವಿಜಯಲಕ್ಷ್ಮೀ ಎನ್. ೩ ಚಿನ್ನದ ಪದಕ, ಎಂ.ಎ. ಇತಿಹಾಸದಲ್ಲಿ ನಾಗೇಂದ್ರ ಎಸ್. ೨ ಚಿನ್ನದ ಪದಕ, ಎಂ.ಎ. ಅರ್ಥಶಾಸ್ತ್ರದಲ್ಲಿ ಮಮತಾರಾಣಿ ಮೊಹಂತಿ ೨ ಚಿನ್ನದ ಪದಕ, ಬಿಕಾಂ ಪದವಿಯಲ್ಲಿ ರೋನಿತ ಎಸ್. ಜೈನ್ ಅವರು ೩ ಚಿನ್ನದ ಪದಕ, ಬಿ.ಎ. ಕನ್ನಡದಲ್ಲಿ ಲತಾ ಜಿ.ಎಲ್. ೨ ಚಿನ್ನದ ಪದಕ, ಎಂ.ಎಸ್.ಡಬ್ಲ್ಯೂ.ನಲ್ಲಿ ಧನಲಕ್ಷ್ಮಿ ೨ ಚಿನ್ನದ ಪದಕ, ಬಿ.ಎ. ರಾಜ್ಯಶಾಸ್ತ್ರದಲ್ಲಿ ಭವಾನಿ ವರ್ಮ ೨ ಸ್ವರ್ಣ ಪದಕ ಸೇರಿದಂತೆ ೭೪ ವಿದ್ಯಾರ್ಥಿಗಳು ೯೮ ಚಿನ್ನದ ಪದಕವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಸ್ವೀಕರಿಸಿ ಸಂಭ್ರಮಿಸಿದರು.
ನಂತರ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವತ್ತ ಮುಂದಾಗಬೇಕು. ೯೮ ಮಂದಿ ಚಿನ್ನದ ಪದಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಚಿನ್ನದ ಪದಕ ಸಿಗದ ವಿದ್ಯಾರ್ಥಿಗಳು ನಿರಾಸೆ ಹೊಂದದೆ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಚಿನ್ನದ ಪದಕ ಪಡೆದಿರುವ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಪದಕ ಪಡೆದಿದ್ದೀರೋ ಅದೇ ವಿಷಯದಲ್ಲೇ ಮುಂದೆ ಇನ್ನು ಉನ್ನತ ಶಿಕ್ಷಣ ಪಡೆದು ಅತ್ಯುನ್ನತ ಸಾಧನೆ ಮಾಡುವಂತೆ ಸಲಹೆ ನೀಡಿದರು.
ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ವಿವಿಯ ವಾರ್ಷಿಕ ವರದಿ ಮಂಡಿಸಿದರು.
ಸಮಾರಂಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ಯ ವಿಶ್ರಾಂತ ಅಧ್ಯಕ್ಷ ಡಾ. ಎ.ಎಸ್. ಕಿರಣ್‌ಕುಮಾರ್ ಅವರು ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ. ಎಂ. ಸಿ. ಸುಧಾಕರ್, ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ನಾಹಿದಾ ಜ಼ಮ್ ಜ಼ಮ್, ಪ್ರೊ. ಕೆ. ಪ್ರಸನ್ನಕುಮಾರ್ ಸೇರಿದಂತೆ ಅನೇಕ ಗಣ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.