ಜಿಲ್ಲೆಯ ಹೆಮ್ಮೆಯ ಪತ್ರಕರ್ತನಿಗೆ ಸಿಗಲಿ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ
ಬೀದರ್:ಆ.7: ಸರಳ ಜೀವನ ನಡೆಸುತ್ತ ಸದ್ದಿಲ್ಲದೇ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ರಾಷ್ಟ್ರದಾದ್ಯಂತ ಏಕಾಂಗಿ ಸೈಕಲ್ ಪ್ರವಾಸದ ಮೂಲಕ ತಮ್ಮ ವಿಶಿಷ್ಟ ಸಾಧನೆಗೆ ಹೆಸರುವಾಸಿ ಜಿಲ್ಲೆಯ ಹೆಮ್ಮೆಯ ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಅವರಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಂಗ ಸಂಘಟನೆಯಾದ ವಿಪ್ರ ಯುವ ಸಂಘಟನೆ ಆಗ್ರಹಿಸಿದೆ.
ವಿಶಿಷ್ಟ ಸಾಧನೆಗೆ ಹೆಸರುವಾಸಿ: ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಅವರ ಸಾಧನೆ ಅತ್ಯಂತ ವಿಶಿಷ್ಟವಾದದ್ದು 28 ತಿಂಗಳಲ್ಲಿ 24-3-1983 ರಿಂದ 14-8-1986ರ ಅವಧಿಯಲ್ಲಿ ದೇಶದಾದ್ಯಂತ ಕನ್ಯಾಕುಮಾರಿ ಇಂದಕಾಶ್ಮೀರ ಹಾಗೂ ಅಸ್ಸಾಂ ದಿಂದ ಗುಜರಾತ್ ವರೆಗೆ 48 ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ಒಬ್ಬಂಟಿ ಸೈಕಲ್ ಸವಾರಿ ಮಾಡಿದ ದೇಶದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆ ಇವರದ್ದು. ಇವರ ಸೈಕಲ್ ಸವಾರಿಯ ಸಾಧನೆ ಕುರಿತು ರಾಷ್ಟ್ರದಾದ್ಯಂತ ಪ್ರಕಟಿತ ಹೆಸರಾಂತ ಒಲಿಂಪಿಕ್ಸ್ ಮ್ಯಾಗಜಿನ್ ‘ಸುಮನ್ ಸೌರಭ್’ ನಲ್ಲಿ 1984ರ ಎಡಿಷನ್ ನಲ್ಲಿ ಪ್ರಕಟಿಸಲಾಗಿತ್ತು. ಈ ಕುರಿತು ಮಾಹಿತಿ ಕಲೆಹಾಕಿದಾಗ ತಿಳಿದದ್ದು ಇವರು 28 ತಿಂಗಳ ಅವಧಿಯಲ್ಲಿ 48 ಸಾವಿರಕ್ಕೂ ಅಧಿಕ ಕಿಮೀ ಒಬ್ಬಂಟಿ ಸೈಕಲ್ ಸವಾರಿ ಮಾಡಿದ ವಿಶಿಷ್ಟ ಸಾಧನೆ ಬಗ್ಗೆ.
ಸದ್ದಿಲ್ಲದೇ ನಡೆಸುತ್ತಾರೆ ಸಾಮಾಜ ಸೇವೆ: ವೆಂಕಟೇಶ ಮೊರಖಂಡಿಕರ್ ಅವರು ಇನ್ನೋಂದು ವಿಶೇಷ ಸದ್ಗುಣದ ಬಗ್ಗೆ ಹೇಳಬೇಕೆಂದರೆ ಅವರು ಸಮಾಜ ಸೇವೆಯನ್ನು ಸದ್ದಿಲ್ಲದೇ ನಡೆಸುತ್ತಾರೆ. ಇವರೇ ಸ್ಥಾಪಿಸಿದ ವೇದವ್ಯಾಸ ವೇದಾಧ್ಯಯನ ಕೇಂದ್ರದಿಂದ ಕಳೆದ 40 ವರ್ಷಗಳಲ್ಲಿ ವಿಪ್ರ ಸಮುದಾಯದ 1500ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಉಪನಯನದ ಜೊತೆಗೆ ವಿದ್ಯಾಪೀಠಕ್ಕೆ ಸೇರಿಸುವ ಮೂಲಕ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಅದಲ್ಲದೇ ವಿಪ್ರ ಬಡ ಮನೆತನದ 150 ಕ್ಕೂ ಹೆಚ್ಚು ಕನ್ಯೆಯರ ತಾಳಿ ಭಾಗ್ಯದಡಿ ಉಚಿತ ವಿವಾಹ ಮಾಡಿಸಿದ್ದಾರೆ.
ಸ್ವತಃ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ್ದರೂ ಸಮಾಜದ ಕಟ್ಟುಪಾಡುಗಳನ್ನು ಮೀರಿಸುವಂತೆ ಇದೆ ಇವರ ಸಾಮಾಜಿಕ ಕಳಕಳಿ, ಓದಿನಲ್ಲಿ ಆಸಕ್ತಿ ಹೊಂದಿದ್ದ ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಭರಿಸಿ ಅವರಿಗೆ ಸರಕಾರಿ ಕೆಲಸಕ್ಕೆ ಸೇರಲು ಪೆÇ್ರತ್ಸಾಹಿಸಿ ತರಬೇತಿ ಕೊಡಿಸಿ ಸರಕಾರಿ ಕೆಲಸಕ್ಕೆ ಸೇರುವಂತೆ ಮಾಡಿದ್ದಾರೆ.
ಪ್ರಸ್ತುತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿಯಾಗಿ ಮತ್ತು ಬೀದರ್ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ವಿಶ್ವ ಮಾಧ್ವ ವೆಲ್ಫೇರ್ ಫೌಂಡೇಶನ್ ನ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಹು ಭಾಷಾ ಮಾಧ್ಯಮದ ಪತ್ರಕರ್ತ: ವೆಂಕಟೇಶ ಮೊರಖಂಡಿಕರ್ ಅವರು ತಮ್ಮ ಪತ್ರಿಕಾ ರಂಗದ ವೃತ್ತಿ ಆರಂಭಿಸಿದ್ದು ಮರಾಠಿ ಭಾಷೆಯ ‘ಕೇಸರಿ’ ಪತ್ರಿಕೆಯ ಮೂಲಕ. ಲೋಕಮಾನ್ಯ ತಿಲಕರನ್ನು ಮಾನಸ ಗುರುಗಳೆಂದು ಅನುಸರಿಸುತ್ತಿದ್ದ ಕಾರಣ ‘ಕೇಸರಿ’ ಯಿಂದ ವೃತ್ತಿ ಆರಂಭಿಸಿ, ಇಂಗ್ಲಿಷ್ ನ ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ಇಂಡಿಪೆಂಡೆಂಟ್ ಸ್ಪಿರಿಟ್, ಕನ್ನಡದ ಕನ್ನಡಮ್ಮ, ಮರಾಠಿ ಭಾಷೆಯ ಏಕಮತ್ ಹಾಗೂ ಲೋಕಮತ್, ಹಿಂದಿ ಭಾಷೆಯ ಮಿಲಾಪ, ತೆಲುಗಿನ ಖ್ಯಾತ ಮ್ಯಾಗಜಿನ್ ವಾರ್ತಾ, ಪ್ರಸ್ತುತ ಕನ್ನಡದ ಪ್ರಚಲಿತ ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರದ್ದು ಬಹು ಭಾಷಾ ಪ್ರತಿಭೆ ದಿಲಿಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಯಲ್ಲಿ ಹಿಂದಿ ಭಾಷೆಯ ಕಾಮೆಂಟರಿ ಹೇಳಿದ್ದರು.
ತಮ್ಮ 67ರ ವಯಸ್ಸಿನಲ್ಲಿಯೂ ಸಮಾಜದ ಏಳಿಗೆಗಾಗಿ ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಹೆಮ್ಮೆಯ ಸಾಧಕ ಪತ್ರಕರ್ತನಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಬೇಕಾಗಿದೆ.