ನಾಳೆ ನಾಗರ ಪಂಚಮಿ: ಸದ್ಗುರು ಸನ್ನಿಧಿಯಲ್ಲಿ ೩ ದಿನ ಜಾತ್ರೆ
ಬೆಂಗಳೂರು.ಆ.೭- ಸದ್ಗುರು ಸನ್ನಿಧಿಯು ಸ್ಥಳೀಯ ಸಮುದಾಯಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಸಾಂಪ್ರದಾಯಿಕ ಆಚರಣೆ ಮತ್ತು ನಾಗನಿಗೆ ಅರ್ಪಣೆಗಳನ್ನು ಆ.೯ರಂದು ನಾಗರ ಪಂಚಮಿಯಂದು ಆಯೋಜಿಸುತ್ತಿದೆ. ಇದು ಸದ್ಗುರು ಸನ್ನಿಧಿಯಲ್ಲಿ ೩ ದಿನಗಳ ಜಾತ್ರೆಯನ್ನು ಒಳಗೊಂಡಿದೆ. ಈ ಕಾರ್ಯಕ್ರಮದಲ್ಲಿ ಯಾವುದೇ ಶುಲ್ಕವಿಲ್ಲದೆ ಎಲ್ಲರೂ ಭಾಗವಹಿಸಬಹುದು.
೨೦೨೨ ರಲ್ಲಿ ಸದ್ಗುರುಗಳು ನಾಗನನ್ನು ಪ್ರತಿಷ್ಠಾಪಿಸಿದ ನಂತರ, ಎರಡನೇ ವರ್ಷದ ನಾಗರ ಪಂಚಮಿ ಆಚರಿಸುತ್ತಿರುವ ನಾಗ ಮಂಟಪವು ವಿಶ್ವದಾದ್ಯಂತದ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ.
ನಾಗನ ಅನುಗ್ರಹ ಪಡೆಯಲು, ಸದ್ಗುರುಗಳಿಂದ ರೂಪಿಸಲ್ಪಟ್ಟ ಶಕ್ತಿಯುತ ಅರ್ಪಣೆಗಳನ್ನು ಈ ದಿನ ನಾಗನಿಗೆ ಅರ್ಪಿಸಬಹುದು. ಅತ್ಯಂತ ಜನಪ್ರಿಯ ಅರ್ಪಣೆಗಳಲ್ಲಿ ಬೆಣ್ಣೆ ಸೇವೆ ಒಂದಾಗಿದೆ, ಇಲ್ಲಿ ವಿಶೇಷವಾಗಿ ತಯಾರಿಸಿದ ಬೆಣ್ಣೆಯನ್ನು ನೇರವಾಗಿ ನಾಗನ ಮೇಲೆ ಲೇಪಿಸಬಹುದು. ಇದು ಪ್ರಭಾವಶಾಲಿ ಪ್ರಕ್ರಿಯೆ ಎಂದು ಹೇಳಲಾಗಿದ್ದು, ಭಕ್ತರಿಗೆ ನಾಗನ ಶಕ್ತಿಗಳೊಂದಿಗೆ ನೇರವಾಗಿ ಸಂಪರ್ಕದಲ್ಲಿರಲು ಅವಕಾಶ ನೀಡುತ್ತದೆ. ನಾಗರ ಪಂಚಮಿ ದೀಪ ಅರ್ಪಣೆ, ನಾಗರ ಪಂಚಮಿ ಕಾರ್ಕೋಟಕ ಅರ್ಪಣೆ, ನಾಗರ ಪಂಚಮಿ ಸರ್ಪ ಸೇವೆ ಮತ್ತು ನಾಗ ದೋಷ ನಿವಾರಣ ಕ್ರಿಯೆ ಕೂಡ ಲಭ್ಯವಿದೆ.
ಸದ್ಗುರು ಸನ್ನಿಧಿಯ ಐದು ಕಿಲೋಮೀಟರ್ ವ್ಯಾಪ್ತಿಯೊಳಗಿನ ಐದು ಹಳ್ಳಿಗಳ ಸ್ಥಳೀಯ ಸಮುದಾಯಗಳು ಈ ಸಂದರ್ಭದಲ್ಲಿ ನಾಗನಿಗೆ ಹಾಲು ಅರ್ಪಿಸಲು ನಾಗ ಮಂಟಪಕ್ಕೆ ನಡೆದುಕೊಂಡು ಬರುತ್ತಾರೆ. ಹಾಲಿನ ಅರ್ಪಣೆಯು ನಾಗನನ್ನು ಮೆಚ್ಚಿಸುತ್ತದೆ ಮತ್ತು ಸಮುದಾಯಕ್ಕೆ ನಾಗನ ಅನುಗ್ರಹ ಮತ್ತು ಆಶೀರ್ವಾದವನ್ನು ತರುತ್ತದೆ ಎಂಬ ನಂಬಿಕೆ ಇದೆ. ಸದ್ಗುರುಗಳು ನಾಗನನ್ನು ಈ ಪ್ರದೇಶದ ಕ್ಷೇತ್ರಪಾಲನನ್ನಾಗಿ ಸ್ಥಾಪಿಸಿದ್ದಾರೆ.
೩ ದಿನಗಳ ಜಾತ್ರೆಯ ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮವು ಸ್ಥಳೀಯ ಕಲಾವಿದರು ಮತ್ತು ಸೌಂಡ್ಸ್ ಆಫ್ ಈಶದ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಆದಿಯೋಗಿ ದಿವ್ಯ ದರ್ಶನವೂ ಇರುತ್ತದೆ. ಆ.೯ರಂದು ಸಂಜೆ ೫:೪೫ ಕ್ಕೆ ಪ್ರಾರಂಭವಾಗುವ ನಾಗರ ಪಂಚಮಿ ಆಚರಣೆಗಳನ್ನು ಸದ್ಗುರು ಮತ್ತು ಈಶ ಫೌಂಡೇಶನ್ ಯೂಟ್ಯೂಬ್ ಚಾನೆಲ್ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.