ಜಿಲ್ಲಾ ಕಾರಾಗೃಹದಲ್ಲಿ ಕಂಪ್ಯೂಟರ್ ತರಬೇತಿ
ಬೀದರ: ಆ.7:ಬೀದರ ಜಿಲ್ಲೆಯ ಕಾರಾಗೃಹದಲ್ಲಿ ಕಾರ್ಮೇಲ್ ಸೇವಾ ಟ್ರಸ್ಟ್ ವತಿಯಿಂದ ಹಾಗೂ ಕಾರಾಗೃಹ ಅಧಿಕಾರಿಗಳ ಸಹಯೋಗದಿಂದ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರಾಗೃಹ ಅಧೀಕ್ಷಕರಾದ ದತ್ತಾತ್ರೇಯ ಮೇಧಾ, ಜೇಲರ್ ಟಿ.ಬಿ. ಭಜಂತ್ರಿ ರವರು ಮಾತನಾಡುತ್ತಾ, ಈ ಉಚಿತ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಿ, ಉತ್ತಮ ಮನುಷ್ಯರಾಗಿ ಬದಲಾಗಿ ಎಂದು ಕಿವಿಮಾತು ಹೇಳಿದರು.
ಕಾರ್ಮೇಲ್ ಸೇವಾ ಟ್ರಸ್ಟ್ನ ಘಟಕ ನಿರ್ದೇಶಕಿ ಭಗಿನಿ ಮರಿಯಾ ರೀತಾ ಅವರು ತಾವುಗಳು ಕಾರಾಗೃಹದಿಂದ ಹೊರಬಂದ ನಂತರ ಸಮಾಜದಲ್ಲಿ ಬದುಕಲು ಕಷ್ಟವಾಗಬಹುದು, ಕೆಲಸವನ್ನು ಹುಡುಕುವುದು ಸಹ ಕಷ್ಟವಾಗಬಹುದು. ಅಂತಹ ಸಂದರ್ಭದಲ್ಲಿ ಈ ತರಬೇತಿ ನಿಮಗೆ ವರವಾಗಿ ಪರಿಣಮಿಸುತ್ತದೆ. ಕಲಿತ ವಿದ್ಯೆ ಎಂದೂ ವ್ಯರ್ಥವಾಗುವುದಿಲ್ಲ. ಕಷ್ಟ ಕಾಲದಲ್ಲಿ ಅದು ಸಹಾಯಕ್ಕೆ ಬರುತ್ತದೆ. ತಾವುಗಳು ಆತ್ಮ ವಿಶ್ವಾಸ ಕಳೆದುಕೊಳ್ಳದೇ, ಯಾವಾಗಲು ಧನಾತ್ಮಕ ಯೋಚನೆಯೊಂದಿಗೆ ಮುಂದೆ ಸಾಗುತ್ತಿರಬೇಕು ಎಂದು ಕೈದಿಗಳಿಗೆ ಕಿವಿಮಾತು ಹೇಳಿದರು.
ಡಾನ್ ಬಾಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರತಿನಿಧಿಗಳಾದ ಫಾ. ಸೋನಿ ಮತ್ತು ಮ್ಯಾಥ್ಯೂ ತರಬೇತಿದಾರರನ್ನು ಉದ್ದೇಶಿಸಿ, ಸಕರಾತ್ಮಕ ವಿಚಾರಗಳನ್ನು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಿಸ್ಟರ್ ಸ್ವರೂಪಾ, ಸಿಸ್ಟರ್ ಪ್ರೀಯಾ, ಡಾ. ಸೌಮ್ಯ ಸ್ವಾಮಿ ಉಪಸ್ಥಿತರಿದ್ದರು. ಸುರೇಶ ತಾಲೆ ಕಾರ್ಯಕ್ರಮವನ್ನು ನಿರೂಪಿಸಿದರು.