ಹಸಿರೋತ್ಸವ,ದೀಪೋತ್ಸವದೊಂದಿಗೆ ಸ್ವಾತಂತ್ರೋತ್ಸವ ಆಚರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಆ.07 78ನೇ ಸ್ವಾತಂತ್ರೋತ್ಸವ ಆಚರಣೆಯನ್ನು ಕ್ಷೇತ್ರದ ಜನರು ಹಬ್ಬದಂತೆ ಆಚರಿಸಬೇಕು, ಈ ಹಿನ್ನೆಲೆಯಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಮೂಲಕ ಹಸಿರೋತ್ಸವ ಹಾಗೂ 1ಲಕ್ಷ ದೀಪ ಹಚ್ಚುವುದರಿಂದ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಕೆ.ನೇಮಿರಾಜ್‍ನಾಯ್ಕ್ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಆರ್. ಕವಿತಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ಜರುಗಿದ, ಆ.15ರ ಸ್ವಾತಂತ್ರೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪ್ರಕೃತಿಯಲ್ಲಿ ಕೇರಳದ ವಯನಾಡಿನಲ್ಲಿ ಜರುಗಿರುವ ಘನಘೋರ ದುರಂತದ ಬಗ್ಗೆ ನಾವಿನ್ನೂ ಹೆಚ್ಚೆತ್ತು ಕೊಳ್ಳದಿದ್ದರೆ, ನಮಗೂ ಒಂದು ದಿನ ಪ್ರಕೃತಿ ತಕ್ಕ ಪಾಠ ಕಲಿಸುತ್ತೆ. ಆದ್ದರಿಂದ ನಾವು ಜಾಗೃತರಾಗೋಣ, ಗಿಡಗಳನ್ನು ನೆಟ್ಟು ಬೆಳೆಸೋಣ, ಹಸಿರಾಗಿಸೋಣ ಎಂದು ಕರೆ ನೀಡಿದರು. ಇನ್ನು ದೀಪೋತ್ಸವಕ್ಕೆ ಆ.14 ಸಂಜೆ 7.30ಕ್ಕೆ ಸರಿಯಾಗಿ ಪ್ರತಿಯೊಂದು ಮನೆಮನೆಯಲ್ಲೂ ದೀಪ ಬೆಳಗಿಸುವ ಮೂಲಕ ಸ್ವಾತಂತ್ರೋತ್ಸವ ಆಚರಣೆಯನ್ನು ಸ್ವಾಗತಿಸೋಣ, ಈ ಬಗ್ಗೆ ಸಮಾಜದಲ್ಲಿರುವ ಸಂಘ ಸಂಸ್ಥೆಗಳು ಕೂಡ ಜಾಗೃತಿ ಮೂಡಿಸಲಿ ಎಂದರು.
ಪ್ರಮುಖವಾಗಿ ಆ.15ರಂದು ಒಂದು ದಿನ ಮದ್ಯ ಮಾರಾಟ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಈ ಬಗ್ಗೆ ತಹಸೀಲ್ದಾರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು. 
ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಅಧಿಕಾರಿ ರಮೇಶ್ ಮಹಾಲಿಂಗಪುರ್, ಶಾಸಕರ ಆಪ್ತ ಸಹಾಯ ದೊಡ್ಡಬಸಪ್ಪ ರೆಡ್ಡಿ,ಶಿವಕುಮಾರಗೌಡ,ಮಹಾಂತೇಶ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.