ವಚನಗಳು ಜ್ಞಾನದ ಆಗರ: ಪ್ರಭುದೇವ ಸ್ವಾಮೀಜಿ
ಬೀದರ್:ಆ.7: ವಚನಗಳು ಜ್ಞಾನದ ಆಗರವಾಗಿವೆ. ಅವುಗಳ ಅಧ್ಯಯನದಿಂದ ಜೀವನ ಪಾವನವಾಗುತ್ತದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ನುಡಿದರು.
ಶ್ರಾವಣ ನಿಮಿತ್ತ ಹಮ್ಮಿಕೊಂಡಿರುವ ವಚನ ಪಠಣ ಅಭಿಯಾನಕ್ಕೆ ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾ ಮಠದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಚನಗಳಲ್ಲಿ ಸರಳ ಬದುಕಿನ ಸೂತ್ರವಿದೆ. ಭವಬಾರಿ ತಪ್ಪಿಸುವ ಮಾರ್ಗವಿದೆ. ದಯೆ, ಕರುಣೆ, ಪ್ರೇಮ, ಪರೋಪಕಾರ ಮೊದಲಾದ ಮಾನವೀಯ ಮೌಲ್ಯಗಳು ವಚನ ಸಾಹಿತ್ಯದಲ್ಲಿ ತುಂಬಿ ತುಳುಕುತ್ತಿವೆ ಎಂದು ತಿಳಿಸಿದರು.
ವಿಜ್ಞಾನದ ಓರೆಗಲ್ಲಿಗೂ ನಿಲ್ಲುವ ತತ್ವಜ್ಞಾನ ವಚನ ತತ್ವ ಮಾತ್ರ. ವಚನಗಳು ಮಾನವನ ಅಂತರಂಗದ ಕೊಳೆಯನ್ನು ಕಳೆದು, ಶುಚಿಗೊಳಿಸಿ, ಪರಮಾತ್ಮನ ವಾಸಕ್ಕೆ ಯೋಗ್ಯವಾಗಿಸುತ್ತವೆ ಎಂದು ಹೇಳಿದರು.
ಸುಂದರವಾದ ಬದುಕು ಕಟ್ಟಿಕೊಳ್ಳಬೇಕೆನ್ನುವವರು, ಭಕ್ತಿ, ಶ್ರದ್ಧೆಯಿಂದ ವಚನಗಳನ್ನು ಓದಿ ಅರಗಿಸಿಕೊಳ್ಳಬೇಕು. ಶ್ರಾವಣದಲ್ಲಿ ನಿತ್ಯ 108 ವಚನಗಳನ್ನು ಕಡ್ಡಾಯವಾಗಿ ಓದಬೇಕು. ಮಕ್ಕಳಿಗೂ ಅವರವರ ವಯೋಮಾನಕ್ಕೆ ತಕ್ಕಂತೆ ನಿತ್ಯ ವಚನ ಪಠಣ ಮಾಡಿಸಬೇಕು ಎಂದು ಸಲಹೆ ಮಾಡಿದರು.
ಸಾಹಿತಿ ರಮೇಶ ಮಠಪತಿ ಮಾತನಾಡಿ, 1999 ರಲ್ಲಿ ಅಕ್ಕ ಅನ್ನಪೂರ್ಣತಾಯಿಯವರು ವಚನ ಪಠಣ ಅಭಿಯಾನ ಆರಂಭಿಸಿದ್ದರು. ಅಂದಿನಿಂದ ಬಸವ ಭಕ್ತರು-ಬಸವಾನುಯಾಯಿಗಳ ಮನೆಯಲ್ಲಿ ಅಸಂಖ್ಯಾತ ವಚನಗಳು ಓದಲ್ಪಡುತ್ತಿವೆ ಎಂದು ಹೇಳಿದರು.
ವಚನ ಪಠಣ ಮಹತ್ವದ ಧಾರ್ಮಿಕ ಆಚರಣೆಯಾಗಿ ಪರಿಣಮಿಸಿದೆ. ಬೆಳಿಗ್ಗೆ ಸ್ನಾನ, ಪೂಜೆಯ ನಂತರ ವಚನ ಪಠಣದ ಸಂಭ್ರಮ ಮನೆ-ಮನೆಯಲ್ಲೂ ಕಾಣುವಂತಾಗಿದೆ ಎಂದು ತಿಳಿಸಿದರು.
ವಚನ ಪಠಣ ಅಭಿಯಾನ ಆರಂಭವಾಗಿ ಇದೀಗ 25 ವರ್ಷಗಳಾಗಿವೆ. ವಚನ ಪಠಣ ಅಭಿಯಾನದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ವರ್ಷ, ವರ್ಷಕ್ಕೂ ವಚನ ಪಠಣಗೈಯುವರ ಸಂಖ್ಯೆ ವೃದ್ಧಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ ಮಾತನಾಡಿ, ವಚನ ಓದಿ ಅರಿವು ಪಡೆದರೆ ಸಾಲದು. ಅವುಗಳನ್ನು ಆಚಾರಕ್ಕಿಳಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಯಾಗಿದ್ದ ಶಾಂತಾ ಜೈರಾಜ ಖಂಡ್ರೆ ಮಾತನಾಡಿದರು. ಚಂದ್ರಶೇಖರ ಗಾದಗಿ ಹಾಗೂ ಪದ್ಮಾವತಿ ಚಿಮಕೋಡೆ ಸಮ್ಮುಖ ವಹಿಸಿದ್ದರು.
ಪ್ರಮುಖರಾದ ಮಾಣಿಕಪ್ಪ ಗೋರನಾಳೆ, ಅಶೋಕ ಎಲಿ, ಸಿ.ಎಸ್. ಗಣಾಚಾರಿ, ಅಮೃತ ಚಿಮಕೋಡೆ, ಚನ್ನಬಸವ ಹಂಗರಗಿ, ವಿಜಯಲಕ್ಷ್ಮಿ ಗೋರ್ಟೆಕರ್, ಸುಮಂಗಲಾ ಅಕ್ಕಿ, ಶ್ರೀದೇವಿ ಗುರುಬಸವ, ಅಣ್ಣಪ್ಪ ಪಡಸಲಗಿ ಇದ್ದರು.
ನೀಲಮ್ಮನ ಬಳಗದ ಗುರುಶ್ರೀ ವಚನ ಗಾಯನ ಮಾಡಿದರು. ಚಂದ್ರಶೇಖರ ಹಂಗರಗಿ ಗುರು ಪೂಜೆ ಹಾಗೂ ದಾಸೋಹ ಕಾರ್ಯ ನೆರವೇರಿಸಿದರು. ಲಿಂಗಾಯತ ಸೇವಾ ದಳದ ಅಧ್ಯಕ್ಷ ಅಭಿಷೇಕ ಸ್ವಾಗತಿಸಿದರು. ಲಿಂಗಾನಂದ ಸುರೇಶ ವಂದಿಸಿದರು.
ಇದಕ್ಕೂ ಮುನ್ನ ಪೂಜ್ಯರ ನೇತೃತ್ವದಲ್ಲಿ ಗುರುವಚನ ಪರುಷ ಕಟ್ಟೆ, ಅಕ್ಕನವರ ಐಕ್ಯ ಮಂಟಪದಲ್ಲಿ ಭಕ್ತರು ವಚನ ಘೋಷಗೈದು, ಸಾಮೂಹಿಕವಾಗಿ ಬಸವಣ್ಣನವರ 108 ವಚನಗಳನ್ನು ಪಠಿಸಿದರು.