ಸಮಾಜದ ಒಳಿತಿಗಾಗಿ ವೈಜ್ಞಾನಿಕ ಸಂಶೋಧನೆ ಅಗತ್ಯ:ಡಾ.ಸಂತೋಷ್ ನಾಯಕ್
ಹೊಸಪೇಟೆ ಆ 07 : ಸಮಾಜದ ಒಳಿತಿಗಾಗಿ ವೈಜ್ಞಾನಿಕ ಸಂಶೋಧನೆ ಅಗತ್ಯವಾಗಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸಂತೋಷ್ ನಾಯಕ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಸಂಶೋಧನೆ:ವರ್ತಮಾನದ ನೆಲೆಗಳು ಎಂಬ ವಿಷಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದುವರಿದ ರಾಷ್ಟ್ರಗಳು ತಮ್ಮ ಜ್ಞಾನ ಶಕ್ತಿಯ ಮೂಲಕ ಜಗತ್ತನ್ನು ನಿಯಂತ್ರಿಸುತ್ತಿದ್ದು, ಸಾಮಾಜಿಕ ಸಂಶೋಧನೆ ಮೂಲಕ ಹೊಸ ವಿಚಾರಗಳು ಹಾಗೂ ಆಲೋಚನೆಗಳನ್ನು ಜಗತ್ತಿಗೆ ಪರಿಚಯಿಸುವದರೊಂದಿಗೆ ಜ್ಞಾನವನ್ನು ತಮ್ಮ ಆಡಳಿತ ಸಾಧನವಾಗಿಸಿಕೊಂಡಿದ್ದಾರೆ ಎಂದರು.
ಸಾಮಾಜಿಕ ಸಂಶೋಧನೆ ಎನ್ನುವುದು ಬಹುಶಿಸ್ತಿನ ನೆಲೆಯಲ್ಲಿ ಸಂಶೋಧನೆಗಳನ ಕೈಗೊಂಡಾಗ ಮನುಷ್ಯನ ವರ್ತನೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ, ಇದರಿಂದ ವೈಜ್ಞಾನಿಕ ವಿಧಾನದಿಂದ ಸಮಾಜದಲ್ಲಿನ ಅನೇಕ ಕುಂದುಕೊರತೆಗಳಿಗೆ ಪರಿಹಾರೋಪಾಯಗಳನ್ನು ಕಾಣಬಹುದು. ಪ್ರಮುಖವಾಗಿ ಇದರಿಂದ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ, ಸಾಮಾಜಿಕ ಸಂಶೋಧನೆ ನಿರಂತರವಾಗಿ ನಡೆಯಬೇಕು. ಆದರೆ ನಮ್ಮಲ್ಲಿ ಇದಕ್ಕೆ ಬೇಕಾದ ಸವಲತ್ತುಗಳು ಕಡಿಮೆಯಿದ್ದು, ನಮ್ಮ ರಾಷ್ಟ್ರದ ಮಾನವ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು, ನಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಿ, ಅಭಿವೃದ್ಧಿ ಹೊಂದಲು ಸಾಮಾಜಿಕ ಸಂಶೋಧನೆ ಒಂದು ವೇದಿಕೆಯಾಗಿದೆ ಎಂದರು.
ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎ.ಎಸ್. ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಿಂದ ಈಗಾಗಲೇ 12 ಬುಡಕಟ್ಟು ಮಹಾಕಾವ್ಯಗಳು ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ರಾಷ್ಟ್ರಾದ್ಯಂತ ಪರಿಚಯಸಿದ್ದು, ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಿಸಿದ ಅನೇಕ ಪುಸ್ತಕಗಳು ವಿದೇಶಿ ವಿಶ್ವವಿದ್ಯಾಲಯಗಳ ಗ್ರಂಥಾಲಯದಲ್ಲಿ ದೊರೆಯುತ್ತಿರುವುದು ಕನ್ನಡ ವಿಶ್ವವಿದ್ಯಾಲಯವಲ್ಲದೆ ನಾಡಿನ ಹೆಮ್ಮೆಯಾಗಿದೆ ಎಂದರು.
ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯ ಹಾಗೂ ಸಮಾಜವಿಜ್ಞಾನಕ್ಕೂ 70 ದಶಕಗಳ ಸಂಬಂಧವಿದೆ. ಸಾಹಿತ್ಯ ನಿರ್ಮಾಣದಲ್ಲಿ ಸಾಮಾಜಿಕ ಸಂಶೋಧನೆ ಬಹುಮುಖ್ಯವಾಗಿದ್ದು, ಜನಸಾಮಾನ್ಯರ ನಾಡಿ ಮಿಡಿತವನ್ನು ಅರ್ಥೈಸಲು ಸಾಮಾಜಿಕ ಸಂಶೋಧನೆ ಸಹಾಯಕವಾಗಿದೆ ಎಂದು ಹೇಳಿದರು.
ಕುಲಸಚಿವ ಡಾ. ವಿಜಯ ಪೂಣಚ್ಚ ತಂಬಂಡ ಅವರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.