ಅಂಗಾಂಗದಾನ ಅರಿವು ಕಾರ್ಯಕ್ರಮ
ಧಾರವಾಡ,ಆ7: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪದವಿಪೂರ್ವ ಕಾಲೇಜ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಆವರಣದಲ್ಲಿ ಅಂಗಾಂಗದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್ ಅಗಡಿ ಇವರು ಮಾತನಾಡಿ ಒಬ್ಬ ದಾನಿಯು ಕಿಡ್ನಿ, ಲಿವರ್, ಹೃದಯ ಶ್ವಾಸಕೋಶ, ಮೆದೋಜಿರಕ ಗ್ರಂಥಿ, ಸಣ್ಣ ಕರಳು ಸೇರಿದಂತೆ ದೇಹದ ಹಲವು ಅಂಗಾಂಗಗಳನ್ನು ದಾನ ಮಾಡುವುದರ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು. ಯಾವುದೇ ವಯಸ್ಸು ಅಥವಾ ಲಿಂಗಬೇದವಿಲ್ಲದೆ ಅಂಗಾಂಗ ಮತ್ತು ಅಂಗಾಂಶ ದಾನ ಮಾಡಬಹುದು. ಒಬ್ಬ ವ್ಯಕ್ತಿ ಅಂಗಾಂಗ ದಾನ ಮಾಡುವುದರಿಂದ 08 ಜನರ ಜೀವ ಉಳಿಸಬಹುದು. ಅಂಗಾಂಗ ದಾನ ಮಾಡಿ ಜೀವ ಉಳಿಸಿ ಎಂದು ಅವರು ಹೇಳಿದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಕೆ. ಚವ್ಹಾಣ ಅವರು ಮಾತನಾಡಿ, ಅಂಗಾಂಗದಾನ ಮಾಡಲು ಹೇಗೆ ರೆಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಖಾ ಬಾಡಗಿ ಇವರು ಡೆಂಗ್ಯೂ ಮತ್ತು ಚಿಕುನಗುನ್ಯಾ ರೋಗಗಳು ಹರಡುವ ಬಗೆ, ರೋಗದ ಲಕ್ಷಣಗಳು ಹಾಗೂ ತಡೆಗಟ್ಟುವ ವಿಧಾನಗಳ ಬಗ್ಗೆ ಅವರು ತಿಳಿಸಿದರು.
ಉಪನ್ಯಾಸಕರಾದ ಡಾ. ಮಂಜುಳಾ ಎನ್. ಸವಡಿ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಡಾ. ಶೇಖರ ಸಜ್ಜನ್ ಸ್ವಾಗತಿಸಿದರು. ಉಪನ್ಯಾಸಕರಾದ ಬಿ.ಎಸ್. ಬಣಕಾರ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜನ ಉಪನ್ಯಾಸಕ ರಾಜಕುಮಾರ ಭಜಂತ್ರಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಸರಕಾರಿ ಪದವಿಪೂರ್ವ ಕಾಲೇಜನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.