ಕಳ್ಳನಿಂದ 16 ಲಕ್ಷ ಮೌಲ್ಯದ ಚಿನ್ನಾಭರಣ ವಶ
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಆ.07: ನಗರದ ಕೌಲ್‌ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೌಲ್‌ ಬಜಾರ್ ಪೊಲೀಸರು ಆರೋಪಿಯೊಬ್ಬನನ್ನು ನ್ಯಾಯಾಲಯದ ಅನುಮತಿ ಪಡೆದು, ಪೊಲೀಸ್ ಕಸಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿ ಆತನಿಂದ 16.14 ಲಕ್ಷ ರೂಗಳ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೌಲ್‌ಬಜಾ‌ರ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಳ್ಳತನಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ನಗರದ ಕರಿಮಾರೆಮ್ಮ ಕಾಲೋನಿ ನಿವಾಸಿ ಹನುಮಂತ (26) ಎನ್ನುವ ಯುವಕನನ್ನು ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.
ಆರೋಪಿ ಹನುಮಂತನನ್ನು ವಿಚಾರಣೆಗೆ ಒಳಪಡಿಸಿದಾಗ, ಆರು ಕಳ್ಳತನದ ಪ್ರಕರಣದಲ್ಲಿ ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯಿಂದ ಅಂದಾಜು 16,14,000 ರೂಗಳ ಬೆಲೆ ಬಾಳುವ 269 ಗ್ರಾಂಗಳ ತೂಕದ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ