ಪತ್ನಿ ಕೊಲೆ ಆರೋಪಿ:ಕಟ್ಟಡದಿಂದ ಜಿಗಿದು ಸಾವು
ಬೆಂಗಳೂರು,ಆ.೭-ಚಾಮರಾಜಪೇಟೆಯಲ್ಲಿ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ ಪಾಪಿ ಪತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಕೋಲಾರದಲ್ಲಿ ನಡೆದಿದೆ.
ಪತ್ನಿ ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪಿ ತಬ್ರೇಝ್ ಪಾಷಾನ ಬೆನ್ನು ಹತ್ತಿದ ಪೊಲೀಸರು ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧನ ಕಾರ್ಯಾಚರಣೆ ಕೈಗೊಂಡಾಗ ಆತನ ಹೆಣ ಎದುರಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಲೇ ಪತ್ನಿಯ ಹತ್ಯೆ ಮಾಡಿದ್ದ ಪಾತಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜೀವ ಕಳೆದುಕೊಂಡಿದ್ದಾನೆ.
ಚಾಮರಾಜಪೇಟೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪತ್ನಿ ಫಾತಿಮಾ (೩೪) ಆರೋಪಿ ಕೊಲೆಗೈದಿದ್ದ,ಕಳೆದ ಆ.೨ರಂದು ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿತ್ತು.
ಐದು ವರ್ಷಗಳ ಹಿಂದೆಯೇ ಈ ದಂಪತಿ ದೂರವಾಗಿದ್ದರು. ಆರೋಪಿ ತಬ್ರೇಝ್ ಪಾಷಾ ಕಳ್ಳತನ ಕೇಸ್, ಗಾಂಜಾ ಕೇಸ್‌ನಲ್ಲಿ ಭಾಗಿಯಾಗಿದ್ದ. ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜತೆ ಫಾತಿಮಾ ವಾಸವಿದ್ದಳು. ಆದರೂ ಆಗಾಗ ಮನೆಗೆ ಬಂದು ಜಗಳ ಮಾಡುತ್ತಿದ್ದ. ಪದೇ ಪದೆ ಮನೆಗೆ ಬರುವಂತೆ ಕಿರುಕುಳ ಕೊಡುತ್ತಿದ್ದ.
ಇತ್ತೀಚೆಗೆ ರಸ್ತೆಯಲ್ಲಿ ಆಕೆಯನ್ನು ಅಡ್ಡ ಹಾಕಿ ಜಗಳ ತೆಗೆದಿದ್ದ ತಬ್ರೇಝ್, ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ಫಾತಿಮಾ ತಾಯಿ, ತಬ್ರೇಝ್ ಏನಾದರೂ ಮಾಡುತ್ತಾನೆ ಎಂಬ ಆತಂಕದಿಂದ ಮನೆಗೆ ಸಿಸಿಟಿವಿ ಅಳವಡಿಸಿದ್ದರು.
ಕಳೆದ ಆ.೨ ರಂದು ಬೆಳಗ್ಗೆ ೮.೩೦ರ ಸುಮಾರಿಗೆ ಮನೆಗೆ ಬಂದು ಜಗಳ ತೆಗೆದಿದ್ದ ತಬ್ರೇಜ್ ಪಾಷ, ಇಬ್ಬರು ಮಕ್ಕಳನ್ನು ಹೊರಗೆ ಕಳಿಸಿದ್ದ. ತಾಯಿಯ ಮುಂದೆಯೇ ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.
ಮನೆಗೆ ಬರುವ ಮುನ್ನ ಹಾಗೂ ಹತ್ಯೆಯ ವೇಳೆ ತನ್ನ ಕೃತ್ಯವನ್ನು ಈ ಪಾತಕಿ ಫೇಸ್‌ಬುಕ್ ಲೈವ್ ಮಾಡಿದ್ದ. ಕೊಲೆಯ ಬಳಿಕ ಕೋಲಾರಕ್ಕೆ ಕಾಲ್ಕಿತ್ತಿದ್ದ. ಮೊಬೈಲ್ ಬಳಸದೇ ಕೋಲಾರದ ಮಸೀದಿಯಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದ. ಬಳಿಕ ನಿನ್ನೆ ಕೋಲಾರದ ಚಿಕ್ಕಮ್ಮನ ಮನೆಗೆ ತೆರಳಿದ್ದ.
ಆರೋಪಿಯನ್ನು ಬಂಧಿಸಲು ಕೋಲಾರಕ್ಕೆ ತೆರಳಿದ್ದ ಚಾಮರಾಜಪೇಟೆ ಪೊಲೀಸರ ತಂಡ ಚಿಕ್ಕಮ್ಮನ ಮನೆಗೆ ಪ್ರವೇಶಿಸಿದಾಗ, ತಪ್ಪಿಸಿಕೊಳ್ಳುವ ಭರದಲ್ಲಿ ಸುಮಾರು ೧೨ ಅಡಿ ಎತ್ತರದ ಮನೆಯ ಟೆರೇಸ್‌ನಿಂದ ಈತ ಜಿಗಿದು ಅಸ್ವಸ್ಥನಾಗಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.