ಸಂತಾನ ಹಗರಣ ಚಿಕಿತ್ಸೆಯಿಂದ ಪುರುಷತ್ವಕ್ಕೆ ಹಾನಿಯಿಲ್ಲ
ಕೆ.ಆರ್.ಪುರ,ಆ.೭- ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಿಂದ ಪುರುಷತ್ವ ಕಳೆದುಕೊಳ್ಳುತ್ತೇವೆ ಎಂಬ ತಪ್ಪು ಕಲ್ಪನೆ ಪುರುಷರಲ್ಲಿ ಇರುವುದರಿಂದ ಅವರು ಚಿಕಿತ್ಸೆಗೆ ಮುಂದೆ ಬರುತ್ತಿಲ್ಲ ಈ ಚಿಕಿತ್ಸೆಯಿಂದ ಪುರುಷತ್ವಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಸಂತಾನ ಹರಣ ಶಸ್ತ್ರ ಚಿಕಿತ್ಸಕರಾದ ಡಾ.ಕಲಾವತಿ ಅವರು ತಿಳಿಸಿದರು.
ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯ ವೈದ್ಯರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲೂ ಲಿಂಗಭೇದ ಮುಂದುವರಿದಿದ್ದು, ಪುರುಷರನ್ನು ಮನವೊಲಿಸುವ ಪ್ರಯತ್ನದ ಜತೆ ಪ್ರತಿ ಪಿಎಚ್‌ಸಿಯಲ್ಲಿ ತಿಂಗಳಿಗೆ ಒಬ್ಬ ವ್ಯಕ್ತಿಯನ್ನಾದರೂ ಮನವೊಲಿಸಿ ಶಸ್ತ್ರ ಚಿಕಿತ್ಸೆ ಮಾಡುವ ಪ್ರಯತ್ನ ಇನ್ನೂ ಹೆಚ್ಚು ಮಾಡಬೇಕು ಎಂದು ಹೇಳಿದರು. ಪತಿಯ ಆಪರೇಷನ್‌ಗೆ ಮೊದಲು ಪತ್ಮಿಯರೇ ಬೇಡ ಅನ್ನುತ್ತಾರೆ, ಸಿಜೇರಿಯನ್ ಆಗಿದ್ದರೂ ಅವರೇ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ, ಅದಕ್ಕೆ ಹಲವು ಕಾರಣಗಳಿವೆ. ಪುರುಷತ್ವ ಕಡಿಮೆ ಆಗಲಿದೆ ಎಂಬ ತಪ್ಪು ತಿಳಿವಳಿಕೆಯೂ ಇದ್ದು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ನಂತರ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್ ರೆಡ್ಡಿ, ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ನೀಡುವ ಪ್ರೋತ್ಸಾಹಧನ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿದೆ. ಪುರುಷರಿಗೆ ೧೧೦೦ ರೂ. ನೀಡಿದರೆ, ಮಹಿಳೆಯರಿಗೆ ೬೦೦ ರೂ.ಗಳು ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರವಳಿಕೆ ತಜ್ಞರು ಡಾ. ಸುರೇಂದ್ರ,ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿನ ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ (ಎನ್.ಎಸ್.ವಿ) ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಪ್ರೇರೇಪಿಸಿದ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಶೈಲ ಕಣ್ಣಾಲ್, ಬೆಂಗಳೂರು ಪೂರ್ವ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಂದ್ಯಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಯಶೋದಮ್ಮ, ಶಸ್ತ್ರಚಿಕಿತ್ಸಾ ವಿಭಾಗದ ಶುಶ್ರೂಷಕ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.