ಧಾರವಾಡ: ಪ್ರಶಸ್ತಿ ಪ್ರದಾನ
ಧಾರವಾಡ,ಆ7 : ಸಂಗೀತದ ಭಾಷೆ ವಿಶ್ವದ ಭಾಷೆ. 64 ವಾತ್ಸಾಯನ ವಿದ್ಯೆಗಳಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದೆ. ಈ ಸಂಗೀತ ಕಲೆಗೆ ಜೀವನ ಸಾಕ್ಷಾತ್ಕಾರಕ್ಕೆ ಸ್ಪೂರ್ತಿ ನೀಡುವಂತಹ ಶಕ್ತಿ ಇದೆ ಎಂದು ಕ.ವಿ.ವಿ. ಇಂಗ್ಲೀಷ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಪಾಟೀಲ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ ನಂದಾ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ `ಡಾ ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2024 ಪ್ರದಾನ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಎಲ್ಲ ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡುವ ಮೂಲಕ ಶರಣರತತ್ವ ಸಿದ್ಧಾಂತಗಳನ್ನು ಜಗತ್ತಿಗೆ ಸರಳವಾಗಿ ಅರ್ಥೈಸಿಕೊಡಲು ಸಾಧ್ಯವಿದೆ. ಈ ಕುರಿತಂತೆ ವಚನಗಳನ್ನು ಸಂಗೀತಕ್ಕೆ ಅಳವಡಿಸಿದರೆ ಶರಣ ಸಂಸ್ಕøತಿ ಹೆಚ್ಚು ಬೆಳೆಯುತ್ತದೆ, ಬಸವಾಭಿಮಾನಿಗಳು ಹೆಚ್ಚು ಆಸ್ಥೆ ವಹಿಸಬೇಕು. ಇಂದು ಯುವಜನಾಂಗ ಸಂಗೀತಕ್ಷೇತ್ರದಲ್ಲಿ ಹೆಚ್ಚು ಸಾಧನೆಗೈಯುತ್ತಿದ್ದಾರೆ. ಅಂಥ ಯುವ ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹ ಅಗತ್ಯವಿದೆ. ಇಂಥ ಪ್ರೋತ್ಸಾಹವನ್ನು ಡಾ.ನಂದಾ ಪಾಟೀಲ ದತ್ತಿ ಕಾರ್ಯಕ್ರಮದ ಮೂಲಕ ಈಡೇರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ದತ್ತಿ ಅಂಗವಾಗಿ ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2024 ಪುರಸ್ಕಾರವನ್ನು ಸಂಗೀತಗಾರ್ತಿ ಡಾ.ವೀಣಾ ಸವದತ್ತಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಈ ಪ್ರಶಸ್ತಿಯು ನನ್ನನ್ನು ಇನ್ನಷ್ಟು ಹಿಂದೂಸ್ತಾನಿ ಸಂಗೀತದಲ್ಲಿ ಸಾಧನೆ ಮಾಡಲು ಪ್ರೇರೆಪಣೆ ನೀಡಿದೆ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ನಂದಾ ಪಾಟೀಲರ ಸಂಗೀತದ ಸಾಧನೆ ಯುವ ಪೀಳಿಗೆಗೆ ಮಾದರಿಯಾಗಿದೆ. ಹಿಂದೂಸ್ತಾನಿ ಸಂಗೀತಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ.ನಂದಾ ಪಾಟೀಲ ಅವರ ಹೆಸರಿನಲ್ಲಿಯುವ ಸಂಗೀತಗಾರರಿಗೆ ಪ್ರಶಸ್ತಿ ನೀಡುವ ಪರಂಪರೆ ಹಮ್ಮಿಕೊಂಡಿರುವುದು ಅತೀವ ಸಂತೋಷವಾಗಿದೆ ಎಂದರು.
ಪ್ರಶಸ್ತಿ ಪುರಸ್ಕøತೆ ಡಾ.ವೀಣಾ ಸವದತ್ತಿ ಸಂಗೀತ ಸಭೆಯನ್ನು ನಡೆಸಿಕೊಟ್ಟರು. ಹಾರ್ಮೋನಿಯಂ ಪರಶುರಾಮ ಕಟ್ಟಿ ಸಂಗಾವಿ, ವಿಜಯ ಸುತಾರ ತಬಲಾ ಸಾಥ್ ನೀಡಿದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದಡಾ. ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಅರವಿಂದ ಯಾಳಗಿ, ಸಿ.ಎಸ್. ಪಾಟೀಲ, ಎಸ್.ಜಿ. ಪಾಟೀಲ, ಬಸವರಾಜ ಬೆಂಗೇರಿ, ಮಹಾಂತೇಶ ನರೇಗಲ್ಲ, ಎಂ. ಬಿ. ಹೆಗ್ಗೇರಿ ಹಾಗೂ ಡಾ. ನಂದಾ ಪಾಟೀಲರ ಶಿಷ್ಯಬಳಗ, ಅಭಿಮಾನಿಗಳು ಹಾಗೂ ಅವರ ಪರಿವಾರ ಸೇರಿದಂತೆಅನೇಕರು ಭಾಗವಹಿಸಿದ್ದರು.