ಮಳೆಯಿಂದ ಜಮೀನುಗಳಲ್ಲಿ ನೀರು: ರೈತರ ಪರದಾಟ
ಚನ್ನಮ್ಮನ ಕಿತ್ತೂರು, ಆ7: ತಾಲೂಕಿನ ಕುಲವಳ್ಳಿ ಗ್ರಾಪಂ ವ್ಯಾಪ್ತಿಯ ನಿಂಗಾಪುರ ಗ್ರಾಮ ಹತ್ತಿರದ ಧಾರವಾಡ ಜಿಲ್ಲೆಗೆ ಒಳಪಡುವ ಹುಲಿಕೆರಿ ಕೆರೆ ಅತಿಯಾಗಿ ಸುರಿದ ಮಳೆಯಿಂದ ಜಮೀನು ಮತ್ತು ರಸ್ತೆಗಳ ಮೇಲೆ ಹರಿದು ನೀರು ತುಂಬಿರುತ್ತದೆ. ಇದು ಶಾಲಾ ಮಕ್ಕಳಿಗೆ ಮತ್ತು ರೈತರ ಜಮೀನುಗಳಿಗೆ ಹೋಗಲು ಅಡ್ಡಿಯಾಗಿದ್ದು ಗಾಳಿ ತುಂಬಿದ ಟ್ಯೂಬಿನ ಮೇಲೆ ತೆರಳುವ ಪ್ರಸಂಗ ಎದುರಾಗಿದೆ. ಈ ಕೆರೆ ಅಂದಾಜು 93 ಎಕರೆ ವಿಸ್ತೀರ್ಣ ಹೊಂದಿದ್ದು 1208 ಹೆಕ್ಟರ್ ಜಮೀನಿಗೆ ನೀರಾವರಿ ಒದಗಿಸುತ್ತದೆ.
ನಿಂಗಾಪೂರ ಗ್ರಾಮವು ಕೆರೆಯ ಪಕ್ಕದಲ್ಲಿ ಇರುವುದರಿಂದ ಕೆರೆಯ ನೀರು ಗ್ರಾಮದ ಸುತ್ತಲೂ ವ್ಯಾಪಿಸಿದೆ ಗ್ರಾಮದ ರೈತರ ಜಮೀನುಗಳು ಸಹ ನೀರಿನಲ್ಲಿ ಮುಳುಗಡೆಯಾಗಿವೆ. ಕೃಷಿಯನ್ನು ಅವಲಂಬಿಸಿಕೊಂಡ ಸುಮಾರು 25ಕ್ಕೂ ಅಧಿಕ ರೈತ ಕುಟುಂಬಗಳು ಈ ಗ್ರಾಮದಲ್ಲಿವೆ.
ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಸಂಪರ್ಕ ಸೇತುವೆ ಇಲ್ಲ ಎನ್ನುವುದೇ ಅವರಿಗಿರುವ ಚಿಂತೆಯಾಗಿದೆ.
ಸುದ್ದಿ ತಿಳಿದ ಶಾಸಕ ಬಾಬಾಸಾಹೇಬ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಸದ್ಯದ ಪರಿಸ್ಥಿತಿಯನ್ನು ಅವಲಂಬಿಸಿ ಬೆಳಗಾವಿಯ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‍ಡಿಆರ್‍ಎಫ್) ತಂಡದ ಅಧಿಕಾರಿ ಕರೆಯಿಸಿ ಬೋಟ್ ತರಿಸಿ ಅಲ್ಲಿಯ ಶಾಲಾ ಮಕ್ಕಳು ಹಾಗೂ ರೈತರಿಗೆ ಸದ್ಯದ ಮಟ್ಟಿಗೆ ಉಪಯೋಗವಾಗಲು ಸ್ಥಳೀಯರಿಗೆ ತರಬೇತಿ ನೀಡಿ ಮುಂದಿನ ದಿನಮಾನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಪಿಡಬ್ಲೂಡಿ ಎಇಇ ಸಂಜು ಮಿರಜಕರ, ಅಶಪಾಕ ಹವಾಲ್ದಾರ, ಸುನೀಲ ಘೀವಾರಿ, ಕೃಷ್ಣಾ ಬಾಳೇಕುಂದ್ರಿ, ಸಂಗನಗೌಡ ಪಾಟೀಲ, ಮುದಕಪ್ಪ ಮರಡಿ, ಚನ್ನಗೌಡ ಪಾಟೀಲ, ಅಪ್ಪಾಶ ಹವಾಲ್ದಾರ, ಮಹಾಂತೇಶ ಎಮ್ಮಿ, ಭೀಷ್ಟಪ್ಪ ಶಿಂಧೆ, ಪಿಡಿಓ ಶ್ರೀಮತಿ ರಾಧಾ, ಗ್ರಾಮ ಲೆಕ್ಕಿಗ, ಇನ್ನೂಳಿದ ಅಧಿಕಾರಿಗಳು ಸೇರಿದಂತೆÉ ರೈತರು, ಗ್ರಾಮಸ್ಥರಿದ್ದರು.