ಬಿಜೆಪಿ ವಿರುದ್ಧ ಆಂದೋಲನಕ್ಕೆ ಮೈಸೂರಿನಲ್ಲಿ ಮುನ್ನುಡಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.07:- ಜನಾಂದೋಲನ ಸಮಾವೇಶವೂ ಕೇವಲ ಜನಬಲ ಪ್ರದರ್ಶನಕ್ಕೆ ಸೀಮಿತವಾಗಬಾರದು. ದೇಶದಾದ್ಯಂತ ಬಿಜೆಪಿ ವಿರುದ್ಧ ಆಂದೋಲನ ರೂಪುಗೊಳ್ಳಲು ಮುನ್ನುಡಿಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಜನಾಂದೋಲನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದ ನಿಯಮಾನುಸಾರವಾಗಿಯೇ ನಿವೇಶನ ಪಡೆದಿದ್ದಾರೆ. ಆದರೆ, ಬಿಜೆಪಿ-ಜೆಡಿಎಸ್ಸಿಗರು ಆಧಾರ ರಹಿತ ದಾಖಲೆಗಳನ್ನು ಸೃಷ್ಟಿಸಿ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸಂಚು ರೂಪಿಸಿದ್ದಾರೆ. ದೇಶದ ಕಳಂಕ ರಹಿತ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಮೊದಲಿಗರು. ಇದನ್ನು ಪ್ರತಿಪಕ್ಷಗಳಿಂದ ಸಹಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ-ಜೆಡಿಎಸ್ ಕೇವಲ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವುದು ಮಾತ್ರವಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶಗೊಳಿಸಲು ಬಿಜೆಪಿ-ಜೆಡಿಎಸ್ ಹುನ್ನಾರದಿಂದ ಪಾದಯಾತ್ರೆ ನಡೆಸುತ್ತಿವೆ. ಇದಕ್ಕೆ ಕಾಂಗ್ರೆಸ್ಸಿಗರು, ಬಿಜೆಪಿ ವಿರೋಧಿಗಳು ತಕ್ಕ ಪ್ರತಿಕ್ರಿಯೆ ನೀಡಬೇಕು. ಈ ಮೂಲಕ ಬಿಜೆಪಿ ವಿರುದ್ಧ ದೇಶಾದಾದ್ಯಂತ ಆಂದೋಲನ ರೂಪಿಸುವ ಜನಾಂದೋಲನವಾಗಿ ಇತಿಹಾಸ ಸೃಷ್ಟಿಸಬೇಕು ಎಂದರು.
ಮುಡಾ ಅಧ್ಯಕ್ಷ ಮರೀಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮರ್ಥ, ಪ್ರಾಮಾಣಿಕತೆಯುಳ್ಳ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆ ತರಲು, ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ವಿರೋಧಪಕ್ಷಗಳ ಸಂಚನ್ನು ವಿಫಲಗೊಳಿಸುವ ಅಗತ್ಯವಿದೆ. ಜನಾಂದೋಲನ ಕಾರ್ಯಕ್ರಮದ ಯಶಸ್ಸಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ 10 ಸಾವಿರ ಜನರನ್ನು ಕರೆತರಲಿದ್ದೇನೆ. ಮುಖ್ಯಮಂತ್ರಿಗೆ ನೈತಿಕ ಶಕ್ತಿ ನೀಡುವುದು ನಮ್ಮ ಕರ್ತವ್ಯ ಎಂದರು.
ಕೇಂದ್ರದ ಕೈಗೊಂಬೆಯಾಗಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಸೋಕಸ್ ನೋಟಿಸ್ ನೀಡಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡಬೇಕಿದೆ. ಇದು ಕಾಂಗ್ರೆಸ್ ಸರ್ಕಾರದ ಅಸ್ತಿತ್ವದ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಂದಿರುವ ಕಳಂಕವನ್ನು ಅಳಿಸಬೇಕಿದೆ. ಹೀಗಾಗಿ ಜನಾಂದೋಲನದಲ್ಲಿ ಹೆಚ್ಚಿನ ಜನರು ಸೇರಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಧರ್ಮಸೇನಾ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವವನ್ನು ಎದುರಿಸಲಾಗದೇ ಬಿಜೆಪಿ-ಜೆಡಿಎಸ್ ಪಕ್ಷಗಳು ಕುತಂತ್ರ ಮಾಡುತ್ತಿವೆ. ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳುವುದು ದಲಿತರ ಅಸ್ತಿತ್ವ ಉಳಿಸಿಕೊಂಡಂತೆ. ದಲಿತರು ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ನಂಜನಗೂಡು ಕ್ಷೇತ್ರದಲ್ಲಿ 20 ಸಾವಿರ, ವರುಣಾ ಕ್ಷೇತ್ರದಿಂದ 25 ಸಾವಿರ ಜನ ಜನಾಂದೋಲನದಲ್ಲಿ ಪಾಲ್ಗೊಳ್ಳುವರು ಎಂದರು.
ಎಐಪಿಸಿಸಿ ಮಾಧ್ಯಮ ವಕ್ತಾರ ಐಶ್ವರ್ಯ ಮಹದೇವ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ತಾಪಂ ಮಾಜಿ ಸದಸ್ಯ ಜಿ.ಕೆ.ಬಸವಣ್ಣ, ಪುಷ್ಪಾಲತಾ ಚಿಕ್ಕಣ್ಣ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಅರುಣ್ ಕುಮಾರ್, ಬಿ.ಎಂ.ರಾಮು, ನಗರಾಧ್ಯಕ್ಷ ಆರ್.ಮೂರ್ತಿ ಇನ್ನಿತರರು ಹಾಜರಿದ್ದರು.